ತಿರುವನಂತಪುರಂ: ಪಾಲಕ್ಕಾಡ್‍ನಲ್ಲಿ ಆರ್ ಎಸ್ ಎಸ್ ಕಾರ್ಯಕರ್ತ ಮತ್ತು ಎಸ್ ಡಿ ಪಿ ಐ ಕಾರ್ಯಕರ್ತನ ಹತ್ಯೆಯನ್ನು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಖಂಡಿಸಿದ್ದಾರೆ. ಪಾಲಕ್ಕಾಡ್‍ನಲ್ಲಿ ನಡೆದಿರುವ ದಾಳಿ ಮತ್ತು ಹತ್ಯೆಗಳು ಮಾನವ ಆತ್ಮಸಾಕ್ಷಿಗೆ ಅಮಾನವೀಯವಾಗಿವೆ ಎಂದು ಪಿಣರಾಯಿ ವಿಜಯನ್ ಫೇಸ್‍ಬುಕ್‍ನಲ್ಲಿ ಬರೆದುಕೊಂಡಿದ್ದಾರೆ. ಕೊರೊನಾ ಬಿಕ್ಕಟ್ಟಿನಿಂದ ಹೊರಬಂದು ರಾಜ್ಯದ ಒಳಿತಿಗಾಗಿ ಮತ್ತು ಉಜ್ವಲ ಭವಿಷ್ಯಕ್ಕಾಗಿ ಕೇರಳ ಒಟ್ಟಾಗಿ ಮುನ್ನಡೆಯುತ್ತಿರುವ ಸಮಯದಲ್ಲಿ ಈ ಹತ್ಯೆಗಳನ್ನು ನಡೆಸಿರುವುದು ಹೇಯಕರ ಎಂದಿದ್ದಾರೆ.
ರಾಜ್ಯದ ಒಳಿತನ್ನು ಹಾಳುಮಾಡುವ ಈ ಹೇಯ ಕೃತ್ಯಗಳಿಗೆ ಕಾರಣರಾದವರ ವಿರುದ್ಧ ರಾಜಿಯಿಲ್ಲದ ಧೋರಣೆ ಸರ್ಕಾರದ ಕಡೆಯಿಂದ ಇರಲಿದೆ. ಅವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು. ಈ ಬಗ್ಗೆ ಪೋಲೀಸರಿಗೆ ಸೂಚನೆ ನೀಡಲಾಗಿದೆ ಎಂದಿರುವರು.
ಕೇರಳದ ಸಹೋದರತ್ವ ಮತ್ತು ಶಾಂತಿಯನ್ನು ಹಾಳು ಮಾಡಲು ಯಾವುದೇ ಶಕ್ತಿಗೆ ಅವಕಾಶ ನೀಡುವುದಿಲ್ಲ. ನಾವು ಜನರನ್ನು ಒಗ್ಗೂಡಿಸಿ ಅಂತಹ ಪ್ರಯತ್ನಗಳ ವಿರುದ್ಧ ದೃಢವಾಗಿ ನಿಲ್ಲುತ್ತೇವೆ. ಒಟ್ಟಾಗಿ ನಾವು ಒಂದೇ ಮನಸ್ಸಿನಿಂದ ಮುನ್ನಡೆಯುತ್ತೇವೆ. ಸೌಹಾರ್ದ ಮತ್ತು ಮಾನವೀಯತೆಯ ಕೇರಳ ಮಾದರಿಯನ್ನು ಉಳಿಸಿಕೊಳ್ಳಲಾಗುವುದು. ಕೋಮುವಾದ ಮತ್ತು ಸಂಕುಚಿತ ಮನೋಭಾವದಿಂದ ರಾಜ್ಯವನ್ನು ಕದಡುವ ಇಂತಹ ಶಕ್ತಿಗಳನ್ನು ಗುರುತಿಸಿ ದೂರವಿಡಬೇಕೆಂದು ಮುಖ್ಯಮಂತ್ರಿಗಳು ಜನರಲ್ಲಿ ಮನವಿ ಮಾಡಿದರು. ಪ್ರಚೋದನೆ ಮತ್ತು ವದಂತಿಗಳಿಗೆ ಬಲಿಯಾಗದೆ ಶಾಂತಿ ಸೌಹಾರ್ದತೆ ಕಾಪಾಡಲು ಎಲ್ಲರೂ ಮುಂದಾಗಬೇಕು ಎಂದು ಪಿಣರಾಯಿ ವಿಜಯನ್ ಫೇಸ್ ಬುಕ್ ನಲ್ಲಿ ಬರೆದುಕೊಂಡಿದ್ದಾರೆ.