ನವದೆಹಲಿ: ತಾಳೆ ಎಣ್ಣೆ (ಪಾಮ್ ಆಯಿಲ್) ರಫ್ತಿನ ಮೇಲೆ ಇಂಡೋನೇಷ್ಯಾ ನಿಷೇಧ ಹೇರಿರುವುದು ಭಾರತದಲ್ಲಿ ಹಲವು ಉತ್ಪನ್ನಗಳ ಬೆಲೆ ಮೇಲೆ ನೇರ ಪರಿಣಾಮ ಬೀರುವ ಸಾಧ್ಯತೆ ನಿಚ್ಚಳವಾಗಿದೆ. ಸಾಬೂನು, ಶಾಂಪೂ, ನೂಡಲ್ ಮತ್ತು ಖಾದ್ಯ ತೈಲಗಳ ಬೆಲೆಗಳಲ್ಲಿ ಗಣನೀಯ ಏರಿಕೆ ಆಗಲಿದೆ.

28ರಿಂದ ಅನ್ವಯ: ಏಪ್ರಿಲ್ 28ರಿಂದ ಜಾರಿಗೆ ಬರುವಂತೆ ಪಾಮೆಣ್ಣೆ ರಫ್ತನ್ನು ನಿಷೇಧಿಸುವುದಾಗಿ ಇಂಡೋನೇಷ್ಯಾ ಕಳೆದ ವಾರ ಪ್ರಕಟಿಸಿತ್ತು. ಎಣ್ಣೆಯ ತೀವ್ರ ಕೊರತೆ ಹಾಗೂ ಖಾದ್ಯ ತೈಲದ ಬೆಲೆಗಳು ಗಗನಕ್ಕೇರುತ್ತಿರುವುದರಿಂದ ಆಗ್ನೇಯ ಏಷ್ಯಾದ ದೇಶ ಈ ಕ್ರಮಕ್ಕೆ ಮುಂದಾಗಿದೆ.
ವೈವಿಧ್ಯಮಯ ಬಳಕೆ: ಪಾಮ್ ಆಯಿಲ್ ಹಾಗೂ ಅದರ ಉತ್ಪನ್ನಗಳನ್ನು ಆಹಾರ ಉತ್ಪನ್ನಗಳು, ಡಿಟರ್ಜೆಂಟ್ಗಳು, ಸೌಂದರ್ಯವರ್ಧಕಗಳು ಮತ್ತು ಜೈವಿಕ ಇಂಧನ ತಯಾರಿಕೆಯಲ್ಲಿ ಬಳಸಲಾಗುತ್ತದೆ. ದಿನ ಬಳಕೆಯ ಸಾಬೂನು, ಅಡುಗೆಯಲ್ಲಿ ಬಳಸುವ ಜಿಡ್ಡುಪದಾರ್ಥಗಳು (ಮಾರ್ಗರಿನ್), ಶಾಂಪೂ, ನೂಡಲ್, ಬಿಸ್ಕತ್ ಮತ್ತು ಚಾಕೋಲೇಟ್ ಉತ್ಪಾದನೆಯಲ್ಲಿ ಅವುಗಳನ್ನು ಬಳಸಲಾಗುತ್ತದೆ. ಆದ್ದರಿಂದ ತಾಳೆ ಎಣ್ಣೆ ಬೆಲೆಯಲ್ಲಿ ಏರಿಕೆಯಾದರೆ ಈ ಕೈಗಾರಿಕೆಗಳ ಉತ್ಪಾದನಾ ಬೆಲೆಗಳೂ ಏರುವುದು ಖಚಿತ.
ಯುದ್ಧದ ಪರಿಣಾಮ: ರಷ್ಯಾ-ಯೂಕ್ರೇನ್ ಯುದ್ಧದ ಪರಿಣಾಮವಾಗಿ ಜಾಗತಿಕ ಅಡುಗೆ ಎಣ್ಣೆ ಪೂರೈಕೆಯಲ್ಲಿ ಈಗಾಗಲೇ ದೊಡ್ಡ ಕೊರತೆ ಉಂಟಾಗಿದ್ದು ತಾಳೆ ಹಾಗೂ ಸೋಯಾ ಎಣ್ಣೆಗಳ ಬೆಲೆಗಳು ದಾಖಲೆಯ ಏರಿಕೆ ಕಂಡಿವೆ ಎನ್ನುತ್ತಾರೆ ಸ್ವಸ್ತಿಕಾ ಇನ್ವೆಸ್ಟ್ಮೆಂಟ್ನ ಸಂಶೋಧನಾ ವಿಭಾಗದ ಮುಖ್ಯಸ್ಥ ಸಂತೋಷ್ ಮೀನಾ.