ಬದಿಯಡ್ಕ: ಎಡನೀರು ಶ್ರೀ ಮಠದಲ್ಲಿ ನೂತನವಾಗಿ ನಿರ್ಮಿಸುವ ಗುರುಭವನಕ್ಕೆ ಶೃಂಗೇರಿ ದಕ್ಷಿಣಾಮ್ನಾಯ ಶ್ರೀಶಾರದಾಪೀಠದ ಆಡಳಿತಾಧಿಕಾರಿ ಪದ್ಮಶ್ರೀ ಡಾಕ್ಟರ್ ವಿ. ಆರ್. ಗೌರೀಶಂಕರ್ ಭೂಮಿಪೂಜೆ ನೆರವೇರಿಸಿದರು. ಜಗದ್ಗುರು ಶ್ರೀ ಶಂಕರಾಚಾರ್ಯ ಸಂಸ್ಥಾನದ ಎಡನೀರು ಮಠದಲ್ಲಿ ಡಾಕ್ಟರ್ ಕೀಲಾರು ಗೋಪಾಲಕೃಷ್ಣಯ್ಯ ಪ್ರತಿಷ್ಠಾನ ಸಂಪಾಜೆ ಇವರ ಸೇವಾ ರೂಪದಲ್ಲಿ ಸಮರ್ಪಿಸುವ ಗುರುಭವನ ನಿರ್ಮಾಣಗೊಳ್ಳಲಿದೆ.
ಭೂಮಿ ಪೂಜೆಯ ಬಳಿಕ ನಡೆದ ಸಭಾ ಕಾರ್ಯಕ್ರಮದಲ್ಲಿ ಕರ್ನಾಟಕ ಸರ್ಕಾರದ ಮಾಜಿ ಅಡ್ವೊಕೇಟ್ ಜನರಲ್ ಅಶೋಕ್ ಹಾರನಹಳ್ಳಿ, ಕಾಸರಗೋಡು ಸಂಸದ ರಾಜಮೋಹನ್ ಉಣ್ಣಿತ್ತಾನ್ ಮುಖ್ಯ ಅತಿಥಿಗಳಾಗಿದ್ದರು. ಎಡನೀರು ಮಠಾಧೀಶ ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿ ಆಶೀರ್ವಚನ ನೀಡಿದರು. ಸಂಪಾಜೆ ಪ್ರತಿಷ್ಠಾನ ಅಧ್ಯಕ್ಷ ಟಿ. ಶ್ಯಾಂ ಭಟ್ ಪ್ರಾಸ್ತಾವಿಕ ಮಾತನಾಡಿ ಸ್ವಾಗತಿಸಿದರು. ರಾಜೇಂದ್ರ ಕಲ್ಲೂರಾಯ ವಂದಿಸಿದರು. ಹಿರಣ್ಯ ವೆಂಕಟೇಶ್ ಭಟ್ ನಿರೂಪಿಸಿದರು. ವೇದಮೂರ್ತಿ ಕಿಳಿಂಗಾರು ಗೋಪಾಲಕೃಷ್ಣ ಭಟ್ ಅವರ ಪೌರೋಹಿತ್ಯದಲ್ಲಿ ಭೂಮಿ ಪೂಜೆ ನೆರವೇರಿತು.