ಕಾಸರಗೋಡು: 2021-22 ನೇ ಸಾಲಿನಲ್ಲಿ ನಿವೃತ್ತಿ ಹೊಂದುತ್ತಿರುವ ಕನ್ನಡ ಮಾಧ್ಯಮ ಶಾಲೆಗಳ ಶಿಕ್ಷಕರಿಗೆ ಬೀಳ್ಕೊಡುಗೆ ಸಮಾರಂಭ ಬೀರಂತಬೈಲಿನಲ್ಲಿರುವ ಕನ್ನಡ ಅಧ್ಯಾಪಕ ಭವನದಲ್ಲಿ ನಡೆಯಿತು. ಕೇರಳ ಪ್ರಾಂತ್ಯ ಕನ್ನಡ ಮಾಧ್ಯಮ ಅಧ್ಯಾಪಕರ ಸಂಘದ ವತಿಯಿಂದ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಜಿಲ್ಲಾ ನಿವೃತ್ತ ಶಿಕ್ಷಣಾಧಿಕಾರಿ, ವಕೀಲ ಎನ್ ಕೆ ಮೋಹನ್‍ದಾಸ್ ಸಮಾರಂಭ ಉದ್ಘಾಟಿಸಿದರು. ಕೇರಳ ಪ್ರಾಂತ್ಯ ಕನ್ನಡ ಮಾಧ್ಯಮ ಅಧ್ಯಾಪಕರ ಸಂಘದ ಕೇಂದ್ರ ಸಮಿತಿಯ ಅಧ್ಯಕ್ಷರಾದ ಶ್ರೀನಿವಾಸ ರಾವ್ ಪಿ ಬಿ ಅಧ್ಯಕ್ಷತೆ ವಹಿಸಿದ್ದರು. ಕಾಸರಗೋಡು ಜಿಲ್ಲಾ ಶಿಕ್ಷಣಾಧಿಕಾರಿ ನಂದಿಕೇಶನ್ ಎನ್, ಕಾಸರಗೋಡು ಜಿಲ್ಲಾ ಯೋಜನಾಧಿಕಾರಿ, ರಾಜ್ಯ ಮಟ್ಟದ ಉತ್ತಮ ಶಿಕ್ಷಕ ಪುರಸ್ಕಾರ ಪಡೆದ ನಾರಾಯಣ ದೇಲಂಪಾಡಿ, ಮಂಜೇಶ್ವರ ಉಪಜಿಲ್ಲಾ ವಿದ್ಯಾಧಿಕಾರಿ ದಿನೇಶ್ ವಿ, ಕಾಸರಗೋಡು ಉಪಜಿಲ್ಲಾ ವಿದ್ಯಾಧಿಕಾರಿ ಅಗಸ್ಟಿನ್ ಬರ್ನಾಡ್ ಉಪಸ್ಥಿತರಿದ್ದರು. ಕೇರಳ ಪ್ರಾಂತ್ಯ ಕನ್ನಡ ಮಾಧ್ಯಮ ಅಧ್ಯಾಪಕರ ಸಂಘದ ಅಧಿಕೃತ ವಕ್ತಾರರಾದ ರವೀಂದ್ರನಾಥ್ ಕೆ ಆರ್ ಪ್ರಾಸ್ತಾವಿಕವಾಗಿ ಮಾತುಗಳನ್ನಾಡಿದರು.
ಈ ಸಂದರ್ಭ 2021-22 ನೇ ಸಾಲಿನಲ್ಲಿ ನಿವೃತ್ತಿ ಹೊಂದಲಿರುವ ಶಿಕ್ಷಕರನ್ನು ಶಾಲು ಹೊದಿಸಿ, ಸ್ಮರಣಿಕೆ ನೀಡಿ ಗೌರವಿಸಲಾಯಿತು. ಕನ್ನಡಪರ ಹೋರಾಟಗಾರ, ಕರ್ನಾಟಕ ಸರಕಾರದ ಗಡಿ ಪ್ರಾಧಿಕಾರದ ವತಿಯಿಂದ ಕಯ್ಯಾರ ಕಿಞ್ಞಣ್ಣ ರೈ ರಾಜ್ಯ ಪ್ರಶಸ್ತಿ ಪಡೆದ ಗಡಿನಾಡ ಕನ್ನಡ ಸಂತ ಪುರುಷೋತ್ತಮ ಅರವರನ್ನು ಸಂಘಟನೆಯ ವತಿಯಿಂದ ಸನ್ಮಾನಿಸಲಾಯಿತು. ಮಂಗಳೂರು ವಿಶ್ವ ವಿದ್ಯಾನಿಲಯದಿಂದ ತುಳು ಯಕ್ಷಗಾನ-ಪರಂಪರೆ ಮತ್ತು ಪ್ರಯೋಗ ಎಂಬ ಮಹಾ ಪ್ರಬಂಧಕ್ಕೆ ಡಾಕ್ಟರೇಟ್ ಪಡೆದ ಕೇರಳ ಪ್ರಾಂತ್ಯ ಕನ್ನಡ ಮಾಧ್ಯಮ ಅಧ್ಯಾಪಕರ ಸಂಘ ಕುಂಬಳೆ ಉಪಜಿಲ್ಲಾ ಸಮಿತಿಯ ಕಾರ್ಯದರ್ಶಿ ಶ್ರೀಶ ಕುಮಾರ ಪಂಜಿತ್ತಡ್ಕ ಹಾಗೂ ಅಧ್ಯಾಪಕ ವೃತ್ತಿಯೊಂದಿಗೆ ಪರಿಸರ ಸಂರಕ್ಷಣೆಯಲ್ಲಿ ತೊಡಗಿಸಿಕೊಂಡು ವಿಶಿಷ್ಟ ಸೇವೆ ಸಲ್ಲಿಸುತ್ತಿರುವ ರಾಜು ಕ್ರಾಸ್ತಾ ಕಿದೂರು ರವರನ್ನು ಸಂಘಟನೆಯ ಪರವಾಗಿ ಅಭಿನಂದಿಸಲಾಯಿತು.
ಸಂಘಟನೆ ಕೇಂದ್ರ ಸಮಿತಿಯ ಪ್ರಧಾನ ಕಾರ್ಯದರ್ಶಿ ಜಯಪ್ರಶಾಂತ್ ಪಾಲೆಂಗ್ರಿ ಸ್ವಾಗತಿಸಿದರು. ಕೋಶಾಧಿಕಾರಿ ಪದ್ಮಾವತಿ ಎಂ ಕಾರ್ಯಕ್ರಮ ನಿರೂಪಿಸಿದರು. ಸಂಘಟನಾ ಕಾರ್ಯದರ್ಶಿ ಪ್ರದೀಪ್ ಕುಮಾರ್ ಶೆಟ್ಟಿ ವಂದಿಸಿದರು.