ಬದಿಯಡ್ಕ: ನೆಕ್ರಾಜೆ ಸಂತಾನ ಶ್ರೀ ಗೋಪಾಲಕೃಷ್ಣ ದೇವಾಲಯದ ಬ್ರಹ್ಮಕಲಶೋತ್ಸವ ಪೂರ್ವಭಾವಿಯಾಗಿ ಬೆಳೆಯಲಾದ ಸಾವಯವ ತರಕಾರಿಯ ಕೊಯ್ಲು ಉತ್ಸವ ಜರುಗಿತು. ದೇವಾಲಯ ಬಳಿಯ ಒಂದು ಎಕ್ರೆ ಗದ್ದೆಯಲ್ಲಿ ಶಾಸ್ತ್ರೀಯ ರೀತಿ ಸೌತೆ, ಚೀನಿ ಮತ್ತು ಕುಂಬಳಕಾಯಿಗಳ ಕೃಷಿ ನಡೆಸಲಾಗಿದ್ದು, ಸಮೃದ್ಧವಾಗಿ ಫಲ ಲಭಿಸಿದೆ. ಅವುಗಳನ್ನು ಕೊಯ್ದು ಬ್ರಹ್ಮಕಲಶೋತ್ಸವದ ಪ್ರಸಾದಭೋಜನಕ್ಕಾಗಿ ಸಂಗ್ರಹಿಸಲಾಗುತ್ತಿದೆ. ನಾಡಿನ ವಿವಿಧ ವಲಯಗಳ ಗಣ್ಯರು, ದೇವಾಲಯದ ವಿವಿಧ ಸಮಿತಿಗಳ ಪದಾಧಿಕಾರಿಗಳು, ಕಾರ್ಯಕರ್ತರು, ವಿವಿಧ ಸಂಘ-ಸಂಸ್ಥೆಗಳ ಪ್ರತಿನಿಧಿಗಳು ಕೊಯ್ಲು ಕಾರ್ಯಕ್ರಮಕ್ಕೆ ಹೆಗಲು ನೀಡಿದರು.
ಈ ಸಂಬಂಧ ದೇವಾಲಯದಲ್ಲಿ ನಡೆದ ಸಭಾ ಕಾರ್ಯಕ್ರಮದಲ್ಲಿ ಟ್ರಸ್ಟಿ ವಿ.ಡಿ.ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಜಿಲ್ಲಾ ಸಮಿತಿ ಅಧ್ಯಕ್ಷ ಮುಖೇಶ್, ಜನಜಾಗೃತಿ ವೇದಿಕೆಯ ಅಶ್ವಥ್, ದೇವಾಲಯ ಸೇವಾ ಸಮಿತಿ ಅಧ್ಯಕ್ಷ ಎಸ್.ಎನ್.ಮಯ್ಯ, ಬಾಲಕೃಷ್ಣ ಪೂಜಾರಿ, ಬದಿಯಡ್ಕ ವಲಯ ಸಂಚಾಲಕ ದಿನೇಶ್, ಪತ್ರಕರ್ತರಾದ ವೀಜಿ. ಕಾಸರಗೋಡು, ಅಖಿಲೇಶ್ ನಗುಮುಗಂ, ಗಾಯಕ ವಸಂತ ಬಾರಡ್ಕ ಮೊದಲಾದವರು ಉಪಸ್ಥಿತರಿದ್ದರು. ಗಣೇಶ ಶ್ರೀವತ್ಸ ಸ್ವಾಗತಿಸಿ, ಸಿಂಚನಾ ವಂದಿಸಿದರು.