ನವದೆಹಲಿ :ಯುದ್ದ ಪೀಡಿತ ಉಕ್ರೇನ್ ನಿಂದ ಯಾರೂ ಇಷ್ಟು ದೊಡ್ಡ ಪ್ರಮಾಣದಲ್ಲಿ ತನ್ನ ನಾಗರಿಕರನ್ನು ಸ್ಥಳಾಂತರಿಸಿಲ್ಲ ಎಂದು ವಿದೇಶಾಂಗ ಸಚಿವ ಎಸ್. ಜೈಶಂಕರ್ ಇಂದು ಲೋಕಸಭೆಯಲ್ಲಿ ತಿಳಿಸಿದರು.
ಉಕ್ರೇನ್‌ನಲ್ಲಿ ಸಿಲುಕಿದ್ದ ನಾಗರಿಕರನ್ನು ಭಾರತಕ್ಕೆ ಸ್ಥಳಾಂತರಿಸುವ ಕಾರ್ಯಾಚರಣೆ 'ಆಪರೇಷನ್ ಗಂಗಾ' ಕುರಿತ ಪ್ರಶ್ನೆಗಳಿಗೆ ಉತ್ತರಿಸಿದ ಅವರು "ಇದು ಭಾರತ ನಡೆಸಿದ ಅತ್ಯಂತ ಸವಾಲಿನ ತೆರವು ಕಾರ್ಯಾಚರಣೆಯಾಗಿತ್ತು.
ಇದು ಇತರ ದೇಶಗಳಿಗೆ ಸ್ಫೂರ್ತಿ ನೀಡುತ್ತಿದೆ'' ಎಂದು ಹೇಳಿದರು.
ನಾಲ್ವರು ಕೇಂದ್ರ ಸಚಿವರು ಉಕ್ರೇನ್‌ನ ನೆರೆಯ ದೇಶಗಳಿಗೆ ಹೋಗದೇ ಇದ್ದಿದ್ದರೆ ಭಾರತಕ್ಕೆ ಇದೇ ಮಟ್ಟದ ಸಹಕಾರ ಸಿಗುತ್ತಿರಲಿಲ್ಲ ಎಂದು ಜೈಶಂಕರ್ ಹೇಳಿದ್ದಾರೆ.
"ತೆರವು ಕಾರ್ಯಾಚರಣೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರೇ ಖುದ್ದಾಗಿ ಆಸಕ್ತಿವಹಿಸಿದ್ದು ಚುನಾವಣೆಯ ನಡುವೆಯೇ ಸಭೆಗಳನ್ನು ನಡೆಸಿ ಪರಿಸ್ಥಿತಿಯನ್ನು ಅವಲೋಕಿಸಿದ್ದಾರೆ'' ಎಂದು ಜೈಶಂಕರ್ ಹೇಳಿದ್ದಾರೆ.
ಉಕ್ರೇನ್‌ನ ಬುಚಾದಲ್ಲಿ ನಾಗರಿಕ ಹತ್ಯೆಗಳ ವರದಿಗಳ ಬಗ್ಗೆ ಸ್ವತಂತ್ರ ತನಿಖೆಗೆ ಭಾರತವು ಬೆಂಬಲ ನೀಡಿದ ಕುರಿತು ಪ್ರತಿಕ್ರಿಯಿಸಿದ ಜೈಶಂಕರ್ , "ಬುಚಾದಲ್ಲಿನ ಹತ್ಯೆಗಳನ್ನು ಭಾರತವು "ಬಲವಾಗಿ ಖಂಡಿಸುತ್ತದೆ". ಇದು ಅತ್ಯಂತ ಗಂಭೀರ ವಿಷಯವಾಗಿದೆ ಹಾಗೂ ಸ್ವತಂತ್ರ ತನಿಖೆಯ ಕರೆಯನ್ನು ನಾವು ಬೆಂಬಲಿಸುತ್ತೇವೆ. ಭಾರತವು "ಶಾಂತಿ''ಯನ್ನು ಆಯ್ಕೆ ಮಾಡಿದೆ ಎಂದು ಹೇಳಿದರು.