ನವದೆಹಲಿ:ತಾವು ಅಧಿಕಾರಕ್ಕೇರಿದಲ್ಲಿ ಉಚಿತ ಕೊಡುಗೆಗಳನ್ನು ನೀಡುವ ಕುರಿತಾದ ರಾಜಕೀಯ ಪಕ್ಷಗಳ ಚುನಾವಣಾ ಭರವಸೆಯನ್ನು ನಿಯಂತ್ರಿಸಲು ಸೂಕ್ತ ಕಾನೂನು ನಿಯಮಗಳನ್ನು ರೂಪಿಸಬೇಕು. ಅದರ ಹೊರತಾಗಿ ರಾಜಕೀಯ ಪಕ್ಷಗಳ ಉಚಿತ ಕೊಡುಗೆಗಳ ಭರವಸೆಗಳನ್ನು ನಿಯಂತ್ರಿಸಲು ಕ್ರಮಗಳನ್ನು ಕೈಗೊಳ್ಳುವುದು ತನ್ನ ಅಧಿಕಾರ ವ್ಯಾಪ್ತಿಯನ್ನು ಮೀರಿ ನಡೆದಂತಾಗುತ್ತದೆ ಎಂದು ಕೇಂದ್ರ ಚುನಾವಣಾ ಆಯೋಗವು ಶನಿವಾರ ಸುಪ್ರೀಂಕೋರ್ಟ್ ಗೆ ತಿಳಿಸಿದೆ.
ಉಚಿತ ಕೊಡುಗೆಗಳ ಭರವಸೆಗಳನ್ನು ನೀಡುವ ರಾಜಕೀಯ ಪಕ್ಷಗಳ ನೋಂದಣಿಯನ್ನು ರದ್ದುಗೊಳಿಸಬೇಕೆಂದು ಆಗ್ರಹಿಸಿ ನ್ಯಾಯವಾದಿ ಹಾಗೂ ಬಿಜೆಪಿ ನಾಯಕ ಅಶ್ವಿನಿ ಉಪಾಧ್ಯಾಯ ಸಲ್ಲಿಸಿದ ಸಾರ್ವಜನಿಕ ಹಿತಾಸಕ್ತಿಯ ಅರ್ಜಿಯ ವಿಚಾರಣೆಯ ವೇಳೆ ಚುನಾವಣಾ ಆಯೋಗವು ಈ ಅಭಿಪ್ರಾಯ ವ್ಯಕ್ತಪಡಿಸಿದೆ.
ಚುನಾವಣೆಯಲ್ಲಿ ಗೆಲುವು ಸಾಧಿಸಿದ ಪಕ್ಷವು ಸರಕಾರವನ್ನು ರಚಿಸುವ ಸಂದರ್ಭದಲ್ಲಿ ಚುನಾವಣಾ ಆಯೋಗಕ್ಕೆ , ಆಯಾ ರಾಜ್ಯದ ನೀತಿಗಳನ್ನು ಹಾಗೂ ನಿರ್ಧಾರಗಳನ್ನು ನಿಯಂತ್ರಿಸಲು ಸಾಧ್ಯವಿಲ್ಲ. ಕಾನೂನಿನಲ್ಲಿ ಅಂತಹ ಯಾವುದೇ ನಿಯಮಗಳನ್ನು ರೂಪಿಸದೆ, ಅಂತಹ ಯಾವುದೇ ಕ್ರಮಗಳನ್ನು ಕೈಗೊಂಡಲ್ಲಿ ಅದು ತನ್ನ ಅಧಿಕಾರ ವ್ಯಾಪ್ತಿಯನ್ನು ಮೀರಿ ನಡೆದಂತಾಗುತ್ತದೆ ಎಂದು ಚುನಾವಣಾ ಆಯೋಗವು ಅಫಿಡವಿಟ್ ನಲ್ಲಿ ತಿಳಿಸಿದೆ. ಉಚಿತ ಕೊಡುಗೆಗಳನ್ನು ನೀಡುವುದು ರಾಜಕೀಯ ಪಕ್ಷಗಳು 'ತಮ್ಮ ನೀತಿಗೆ ಅನುಸಾರವಾಗಿ ನಡೆದುಕೊಳ್ಳುವ ನಿರ್ಧಾರವಾಗಿರುತ್ತದೆ' ಎಂದು ಆಯೋಗ ಅಭಿಪ್ರಾಯಿಸಿದೆ.
ರಾಜಕೀಯ ಪಕ್ಷಗಳಿಗೆ ನ್ಯಾಯಾಲವು ಮಾರ್ಗದರ್ಶಿ ಸೂತ್ರಗಳನ್ನು ರೂಪಿಸಬಹುದಾಗಿದೆಯೇ ಹೊರತು ತನಗೆ ಅವುಗಳನ್ನು ಹೇರಲು ಸಾಧ್ಯವಿಲ್ಲವೆಂದು ಚುನಾವಣಾ ಆಯೋಗ ನ್ಯಾಯಾಲಯಕ್ಕೆ ತಿಳಿಸಿದೆ.
ಉಚಿತ ಕೊಡುಗೆಗಳನ್ನು ನೀಡುವಂತಹ ನೀತಿಗಳನ್ನು ಜಾರಿಗೊಳಿಸುವುದು ಆರ್ಥಿಕವಾಗಿ ಕಾರ್ಯಸಾಧ್ಯವೇ ಅಥವಾ ರಾಜ್ಯದ ಆರ್ಥಿಕ ಆರೋಗ್ಯದ ಮೇಲೆ ಪ್ರತಿಕೂಲ ಪರಿಣಾಮ ಬೀರುವುದೇ ಎಂಬುದನ್ನು ಆಯಾ ರಾಜ್ಯದ ಮತದಾರರು ನಿರ್ಧರಿಸಬೇಕಾಗಿದೆ ಎಂದು ಚುನಾವಣಾ ಆಯೋಗವು ನ್ಯಾಯಾಲಯಕ್ಕೆ ನೀಡಿದ ಉತ್ತರದಲ್ಲಿ ತಿಳಿಸಿದೆ.
ರಾಜಕೀಯ ಪಕ್ಷಗಳು ಚುನಾವಣಾ ಪ್ರಣಾಳಿಕೆಗಳಲ್ಲಿ ಉಚಿತ ಕೊಡುಗೆಗಳನ್ನು ಘೋಷಿಸುವುದಕ್ಕೆ ಸಂಬಂಧಿಸಿ ಸುಪ್ರೀಂಕೋರ್ಟ್ ಜನವರಿ ತಿಂಗಳಲ್ಲಿ ಕೇಂದ್ರ ಸರಕಾರ ಹಾಗೂ ಚುನಾವಣಾ ಆಯೋಗಕ್ಕೆ ನೋಟಿಸ್ ಜಾರಿಗೊಳಿಸಿತ್ತು ಹಾಗೂ ಈ ಬಗ್ಗೆ ನಾಲ್ಕು ವಾರಗಳೊಳಗೆ ಉತ್ತರಿಸಬೇಕೆಂದು ತಿಳಿಸಿತ್ತು.
ರಾಜಕೀಯ ಪಕ್ಷಗಳು ಮತದಾರರಿಗೆ ಉಚಿತ ಕೊಡುಗೆಗಳನ್ನು ಘೋಷಿಸುತ್ತಿರುವ ಬಗ್ಗೆ ಸುಪ್ರೀಂ ಕೋರ್ಟ್ ಕಳವಳ ವ್ಯಕ್ತಪಡಿಸಿತ್ತು.