ತಿರುವನಂತಪುರಂ: ರಾಜ್ಯದಲ್ಲಿ ಮಾಸ್ಕ್ ಬಳಕೆ ಮತ್ತೆ ಕಡ್ಡಾಯಗೊಳಿಸಲಾಗಿದೆ. ಧರಿಸದಿದ್ದರೆ ದಂಡ ವಿಧಿಸಲಾಗುತ್ತದೆ. ಮಾಸ್ಕ್ ಬಳಕೆಯನ್ನು ಬಿಗಿಗೊಳಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಕೊರೋನಾ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿರುವ ಕಾರಣ ಮಾಸ್ಕ್ ನ್ನು ಕಡ್ಡಾಯಗೊಳಿಸುವ ನಿರ್ಧಾರ ಕೈಗೊಳ್ಳಲಾಗಿದೆ.
ರಾಜ್ಯ ಮತ್ತು ದೇಶದ ಕೊರೋನಾ ಪರಿಸ್ಥಿತಿಗಳನ್ನು ರಾಜ್ಯ ವಿಪತ್ತು ನಿರ್ವಹಣಾ ಸಮಿತಿಯು ಮೌಲ್ಯಮಾಪನ ಮಾಡಿದೆ. ಇದರ ಬೆನ್ನಲ್ಲೇ ಮಾಸ್ಕ್ ಬಳಕೆಯನ್ನು ಬಿಗಿಗೊಳಿಸಲು ಆದೇಶ ಹೊರಡಿಸಲಾಗಿದೆ. ಸಾರ್ವಜನಿಕ ಸ್ಥಳಗಳು, ಸಭೆಗಳು, ಕೆಲಸದ ಸ್ಥಳಗಳು ಮತ್ತು ಪ್ರಯಾಣದಲ್ಲಿರುವಾಗ ಮಾಸ್ಕ್ ಧರಿಸಬೇಕು. ಇದನ್ನು ಉಲ್ಲಂಘಿಸಿದರೆ ವಿಪತ್ತು ತಡೆ ಕಾಯ್ದೆಯಡಿ ಕ್ರಮ ಕೈಗೊಳ್ಳಲಾಗುವುದು. ಆರೋಗ್ಯ ಸಚಿವೆ ವೀಣಾ ಜಾರ್ಜ್ ಅವರು ರಾಜ್ಯದಲ್ಲಿ ಕೊರೊನಾ ಪರಿಸ್ಥಿತಿಯನ್ನು ಅವಲೋಕಿಸಿದ ನಂತರ ಮಾಸ್ಕ್ ಬಳಸುವುದನ್ನು ಮುಂದುವರಿಸುವಂತೆ ರಾಜ್ಯ ಸರ್ಕಾರಕ್ಕೆ ನಿನ್ನೆ ನಿರ್ದೇಶನ ನೀಡಿದ್ದರು.
ಕೊರೊನಾ ಪ್ರಕರಣಗಳು ಇಳಿಮುಖವಾಗುತ್ತಿದ್ದಂತೆ ರಾಜ್ಯದಲ್ಲಿ ನಿರ್ಬಂಧಗಳನ್ನು ಸಡಿಲಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ಮಾಸ್ಕ್ ಧರಿಸದವರಿಗೆ ದಂಡ ವಿಧಿಸದಿರಲು ಸರ್ಕಾರ ನಿರ್ಧರಿಸಿತ್ತು. ಆದರೆ ರೋಗಿಗಳ ಸಂಖ್ಯೆ ಪ್ರತಿದಿನ ಮತ್ತೆ ಏರಲು ಪ್ರಾರಂಭಿಸಿರುವುದರಿಂದ, ಕೊರೋನಾ ನಿರ್ಬಂಧಗಳನ್ನು ಬಿಗಿಗೊಳಿಸಲಾಯಿತು. ದಂಡವನ್ನು ರದ್ದುಪಡಿಸಿದ ಬಳಿಕ, ಜನರು ಮಾಸ್ಕ್ ಧರಿಸದೆ ಸಾರ್ವಜನಿಕವಾಗಿ ಕಾಣಿಸಿಕೊಳ್ಳಲು ಪ್ರಾರಂಭಿಸಿದ್ದಾರೆ.