ಚೆಂಗಲ್ಪಟ್ಟು (ತಮಿಳುನಾಡು): ದೇಶದಾದ್ಯಂತ ನಿತ್ಯವೂ ಬಿಸಿ ಬಿಸಿ ಚರ್ಚೆಗೆ ಗ್ರಾಸವಾಗುತ್ತಿರುವ ಇಂಧನ ದರ ಏರಿಕೆಯು ಈಗ ಸಂಭ್ರಮದ ಮದುವೆ ಮನೆಗೂ ಕಾಲಿಟ್ಟಿದೆ. ನವ ವಧು-ವರನಿಗೆ ಅವರ ಸ್ನೇಹಿತರು ಪೆಟ್ರೋಲ್ ಮತ್ತು ಡೀಸೆಲ್ ಅನ್ನು ಉಡುಗೊರೆಯಾಗಿ ಕೊಟ್ಟಿದ್ದಾರೆ.
ಪೆಟ್ರೋಲ್ ಮತ್ತು ಡೀಸೆಲ್ ತುಂಬಿರುವ ಬಾಟಲಿಗಳನ್ನು ಉಡುಗೊರೆಯಾಗಿ ಸ್ವೀಕರಿಸಿದ ಕುಮಾರ್ ಮತ್ತು ಕೀರ್ತನಾ ಕೆಲ ಸಮಯ ಗೊಂದಲಕ್ಕೆ ಒಳಗಾದರು. ನಂತರ ನಗು ಮೊಗದಿಂದಲೇ 'ಅಮೂಲ್ಯವಾದ' ಉಡುಗೊರೆಯನ್ನು ಸ್ವೀಕರಿಸಿದರು. ಅದರ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ.
ಕಳೆದ 16 ದಿನಗಳಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ದರ 14 ಬಾರಿ ಪರಿಷ್ಕರಣೆಯಾಗಿ, ಪ್ರತಿ ಲೀಟರ್‌ಗೆ ತಲಾ 10 ರೂಪಾಯಿಯಷ್ಟು ಏರಿಕೆಯಾಗಿದೆ. ತಮಿಳುನಾಡಿನಲ್ಲಿ ಎರಡೂ ಇಂಧನಗಳ ದರ 100 ರೂಪಾಯಿ ದಾಟಿದ್ದು, ಲೀಟರ್ ಪೆಟ್ರೋಲ್ ₹110.85 ಮತ್ತು ಡೀಸೆಲ್ ₹100.94ಕ್ಕೆ ಮಾರಾಟವಾಗುತ್ತಿದೆ.
ದಿನ ಬಳಕೆಯ ವಸ್ತುಗಳು ಹಾಗೂ ಇಂಧನ ದರದಲ್ಲಿ ಭಾರೀ ಏರಿಕೆಯಾದ ಸಂದರ್ಭದಲ್ಲೆಲ್ಲ ನವ ವಧು-ವರರು ಇಂಥದ್ದೇ ರೀತಿಯ ವಿಶೇಷ ಉಡುಗೊರೆಗಳನ್ನು ಪಡೆದಿದ್ದಾರೆ. ಈ ಹಿಂದೆ ಹಲವು ರಾಜ್ಯಗಳಲ್ಲಿ ಈರುಳ್ಳಿ ಮಾಲೆ, ಅಡುಗೆ ಅನಿಲ ಸಿಲಿಂಡರ್, ಪೆಟ್ರೋಲ್-ಡೀಸೆಲ್ ಅನ್ನು ನೀಡುವ ಮೂಲಕ ಪ್ರತಿಭಟನೆ ದಾಖಲಿಸಿರುವುದು ವರದಿಯಾಗಿವೆ.