ಕಾಸರಗೋಡು: ಕಾರಡ್ಕ ಬ್ಲಾಕ್ ವ್ಯಾಪ್ತಿಯ ವಿವಿಧ ಪಂಚಾಯಿತಿ ವ್ಯಾಪ್ತಿಯಲ್ಲಿ ಆನೆಗಳ ಉಪಟಳ ತಡೆಗಟ್ಟುವಂತೆ ಅಗ್ರಹಿಸಿ ಕೃಷಿಕರಿಂದ ಕಾಸರಗೋಡು ಅರಣ್ಯಾಧಿಕಾರಿ ಕಚರಿ ಎದುರು ಗುರುವಾರ ಪ್ರತಿಭಟನಾ ಧರಣಿ ನಡೆಯಿತು. ಕೃಷಿಕರ ಒಕ್ಕೂಟ ವತಿಯಿಂದ ಧರಣಿ ಆಯೋಜಿಸಲಾಗಿತ್ತು.
ನಿರಂತರ ಕೃಷಿನಾಶ ನಡೆಸುತ್ತಿರುವ ಕಾಡಾನೆಗಳ ಉಪಟಳ ನಿಯಂತ್ರಣಕ್ಕೆ ಸರ್ಕಾರ ಶಾಶ್ವತ ಪರಿಹಾರ ಕಂಡುಕೊಳ್ಳಬೇಕು, ಕೃಷಿಹಾನಿ ನಡೆಸುವ ಆನೆಗಳನ್ನು ಮರಳಿ ಕಾಡಿಗೆ ಕಳುಹಿಸಲು ಅರಣ್ಯ ಇಲಾಖಝೆ ಅಗತ್ಯ ಕ್ರಮ ಕೈಗೊಳ್ಳಬೇಕು, ಕಾಡುಪ್ರಾಣಿಗಳ ಹಾವಳಿ ತಡೆಗಟ್ಟಲು ಅರಣ್ಯ ಇಲಾಖೆ ಅಧಿಕಾರಿಗಳು ಪ್ರಾಮಾಣಿಕ ಶ್ರಮ ನಡೆಸಬೇಕು, ಕಾಡುಪ್ರಾಣಿಗಳ ದಾಳಿಯಿಂದ ದೈಹಿಕ ಹಾಗೂ ಕೃಷಿಗೆ ಉಂಟಾಗಿರುವ ನಾಶನಷ್ಟಕ್ಕೆ ನ್ಯಾಯೋಚಿತ ನಷ್ಟ ಪರಿಹಾರ ಒದಗಿಸಿಕೊಡಬೇಕು ಮುಂತದ ಬೇಡಿಕೆ ಮುಂದಿರಿಸಿ ಧರಣಿ ನಡೆಸಲಾಯಿತು. ಕಳೆದ ಹಲವು ವರ್ಷಗಳಿಂದ ದೇಲಂಪಾಡಿ, ಬೇಡಡ್ಕ, ಕುತ್ತಿಕ್ಕೋಲ್, ಮುಳಿಯಾರ್, ಕಾರಡ್ಕ ಪಂಚಾಯಿತಿ ವ್ಯಾಪ್ತಿಯ ಕೃಷಿಕರು ಆನೆಗಳ ದಾಳಿಯಿಂದ ಕೋಟ್ಯಂತರ ರೂ. ಮೊತ್ತದ ಆಸ್ತಿಪಾಸ್ತಿ ಕಳೆದುಕೊಂಡಿದ್ದಾರೆ. ಸರ್ಕಾರ ಇನ್ನಾದರೂ ಕಣ್ಣು ತೆರೆಯಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು. ಸಮಿತಿ ಅಧ್ಯಕ್ಷ ರಾಂಕೃಷ್ಣನ್ ಧರಣಿ ಉದ್ಘಾಟಿಸಿದರು. ಸಮಿತಿ ಪದಾಧಿಕಾರಿಗಳು, ಮಹಿಳೆಯರು ಸೇರಿದಂತೆ ನೂರಾರು ಮಂದಿ ಕೃಷಿಕರು ಪಾಲ್ಗೊಂಡಿದ್ದರು.