ನವದೆಹಲಿ: ವಾಯುವ್ಯ ದೆಹಲಿಯ ಜಹಾಂಗೀರ್‌ಪುರಿ ಪ್ರದೇಶದಲ್ಲಿ ಶನಿವಾರ ಹನುಮ ಜಯಂತಿ ಮೆರವಣಿಗೆ ವೇಳೆ ಎರಡು ಸಮುದಾಯಗಳ ನಡುವೆ ಘರ್ಷಣೆ ನಡೆದಿದ್ದು, ಹಲವು ಪೊಲೀಸ್ ಸಿಬ್ಬಂದಿ ಗಾಯಗೊಂಡಿದ್ದಾರೆ.
ಸಂಜೆ 6 ಗಂಟೆ ಸುಮಾರಿಗೆ ನಡೆದ ಹಿಂಸಾಚಾರದಲ್ಲಿ ಕಲ್ಲು ತೂರಾಟ ನಡೆದಿದೆ ಮತ್ತು ಕೆಲವು ವಾಹನಗಳಿಗೆ ಬೆಂಕಿ ಹಚ್ಚಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಜಹಾಂಗೀರ್ ಪುರಿ ಮತ್ತಿತರ ಕೋಮು ಸೂಕ್ಷ್ಮ ಪ್ರದೇಶಗಳಿಗೆ ಹೆಚ್ಚುವರಿ ಪೊಲೀಸ್ ಪಡೆಗಳನ್ನು ರವಾನಿಸಲಾಗಿದೆ.
ಪ್ರತಿ ವರ್ಷ ಹನುಮ ಜಯಂತಿಯಂದು ಸಾಂಪ್ರಾದಾಯಿಕ ಮೆರವಣಿಗೆ ನಡೆಸಲಾಗುತ್ತದೆ. ಮೆರವಣಿಗೆಯು ಕುಶಾಲ್ ಚಿತ್ರಮಂದಿರಕ್ಕೆ ಬಂದಾಗ ಎರಡು ಕೋಮುಗಳ ನಡುವೆ ಘರ್ಷಣೆ ಉಂಟಾಯಿತು. ಕಲ್ಲು ತೂರಾಟವೂ ನಡೆದಿದೆ ಎಂದು ದೆಹಲಿ ಪೊಲೀಸ್ ಪಿಆರ್ ಒ ಅನ್ಯೇಶ್ ರಾಯ್ ಪಿಟಿಐಗೆ ತಿಳಿಸಿದ್ದಾರೆ.
ಮೆರವಣಿಗೆಗೆ ನಿಯೋಜಿಸಲಾಗಿದ್ದ ಪೊಲೀಸರು ಮಧ್ಯಪ್ರವೇಶಿಸಿ ಪರಿಸ್ಥಿತಿಯನ್ನು ಹತೋಟಿಗೆ ತಂದರು ಆದರೆ ಕಲ್ಲು ತೂರಾಟದಿಂದಾಗಿ ಕೆಲವು ಪೊಲೀಸರು ಗಾಯಗೊಂಡಿದ್ದು, ಅವರನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಪರಿಸ್ಥಿತಿ ನಿಯಂತ್ರಣದಲ್ಲಿದೆ. ಎಲ್ಲಾ ಹಿರಿಯ ಅಧಿಕಾರಿಗಳು ಸ್ಥಳದಲ್ಲೇ ಇದ್ದಾರೆ. ಇದು ಸೂಕ್ಷ್ಮ ಪ್ರದೇಶವಾಗಿದ್ದು, ಹೆಚ್ಚುವರಿ ಪೊಲೀಸ್ ಪಡೆಗಳನ್ನು ಒದಗಿಸಲಾಗಿದೆ ಎಂದು ಅವರು ಹೇಳಿದರು.
ಈವರೆಗಿನ ಮಾಹಿತಿ ಪ್ರಕಾರ ಸುಮಾರು 5-6 ಪೊಲೀಸ್ ಸಿಬ್ಬಂದಿ ಮತ್ತು ಒಂದೆರಡು ನಾಗರಿಕರು ಗಾಯಗೊಂಡಿದ್ದಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.