ಕೋವಿಡ್-19 ಬಗ್ಗೆ ಭಾರತ ಸರ್ಕಾರ ನೀಡಿದ ಅಧಿಕೃತ ದಾಖಲೆಗಳನ್ನು ವಿಶ್ವ ಆರೋಗ್ಯ ಸಂಸ್ಥೆ (WHO) ನಿರಾಕರಿಸಿದೆ ಎಂದು thewire.science ವರದಿ ಮಾಡಿದೆ.
ಇನ್ನೇನು ಬಿಡುಗಡೆಯಾಗಲಿರುವ WHO ವರದಿಯು, ಭಾರತ ಸರ್ಕಾರವು ಅಧಿಕೃತವಾಗಿ ನೀಡಿರುವ ಕೋವಿಡ್ ಸಾವುಗಳಿಗಿಂತ ಕನಿಷ್ಟ ನಾಲ್ಕು ಪಟ್ಟು ಹೆಚ್ಚು ಸಾವು ಸಂಭವಿಸಿದೆ ಎಂದು ಅಂದಾಜಿಸಿದೆ. ಈ ಹಿಂದೆಯೇ ಹಲವು ಸಂಶೋಧಕರು ಹಾಗೂ ಸಂಸ್ಥೆಗಳು ಭಾರತದಲ್ಲಿ ಸರ್ಕಾರವು ಅಧಿಕೃತವಾಗಿ ನೀಡಿರುವುದಕ್ಕಿಂತ ಹಲವು ಪಟ್ಟು ಹೆಚ್ಚು ಕೋವಿಡ್ ಸಾವುಗಳು ಸಂಭವಿಸಿದೆಯೆಂದು ಕೆಲವು ಮಾನದಂಡಗಳ ಮೇರೆಗೆ ಊಹಿಸಿತ್ತು. ಅದಾಗ್ಯೂ, ಸರ್ಕಾರವು ಈ ವರದಿಗಳನ್ನು ತಳ್ಳಿ ಹಾಕಿತ್ತು. ಮಾನ್ಯವಲ್ಲದ ಮಾದರಿಯಲ್ಲಿ ಈ ಊಹೆಗಳನ್ನು ಮಾಡಲಾಗಿದೆ ಎಂದು ಸರ್ಕಾರ ಆ ವರದಿಗಳನ್ನು ನಿರಾಕರಿಸಿತ್ತು.
ಸಾಂಕ್ರಾಮಿಕ ಕಾಲಘಟ್ಟದ ಒಂದು ನಿರ್ದಿಷ್ಟ ಅವಧಿಯ ಒಟ್ಟು ಸಾವುಗಳನ್ನು, ಹಿಂದಿನ ಸಾಮಾನ್ಯ ವರ್ಷದ ಅದೇ ನಿರ್ದಿಷ್ಟ ಅವಧಿಯೊಂದಿಗೆ ಹೋಲಿಸುವ ಮೂಲಕ ʼಹೆಚ್ಚುವರಿ ಸಾವುಗಳನ್ನು' ಲೆಕ್ಕ ಹಾಕಲಾಗುತ್ತದೆ. ಸಾಂಕ್ರಾಮಿಕ ರೋಗದ ಸಾವುಗಳನ್ನು ಲೆಕ್ಕ ಹಾಕಲು ʼಹೆಚ್ಚುವರಿ ಸಾವುಗಳುʼ ಅತ್ಯಂತ ನಿಖರವಾದ ಮಾರ್ಗವಾಗಿದೆ. ಅದಾಗ್ಯೂ, ಎಲ್ಲಾ ಹೆಚ್ಚುವರಿ ಸಾವುಗಳನ್ನು ಸಾಂಕ್ರಾಮಿಕದಿಂದ ಸಂಭವಿಸಿದ ಸಾವುಗಳೆಂದೇ ಪರಿಗಣಿಸಲಾಗದು, ಸಾಂಕ್ರಾಮಿಕದಿಂದ ಉಂಟಾದ ಸಾರ್ವಜನಿಕ ಆರೋಗ್ಯ ಸೇವೆಯಲ್ಲಿನ ವ್ಯತ್ಯಯದಿಂದ ಕೂಡಾ ಈ ಹೆಚ್ಚುವರಿ ಸಾವುಗಳು ಸಂಭವಿಸುತ್ತದೆ. ಕೋವಿಡ್ ಸಂದರ್ಭದಲ್ಲಿ ಇತರೆ ರೋಗಿಗಳಿಗೆ ಚಿಕಿತ್ಸೆ ನೀಡಲಾಗದೆ ಮೃತಪಟ್ಟಿರುವುದನ್ನು ಕೂಡಾ ಇಲ್ಲಿ ಉಲ್ಲೇಖಿಸಬಹುದು.
ಇದೇ ಲೆಕ್ಕಾಚಾರದಲ್ಲಿ, ಭಾರತದ ಈ ಹಿಂದಿನ ಸಾಮಾನ್ಯ ಅವಧಿಯಲ್ಲಿ ನಡೆದ ಸಾವಿಗೂ ಸಾಂಕ್ರಾಮಿಕ ಸಂದರ್ಭದಲ್ಲಿ ನಡೆದ ಸಾವಿಗೂ ಬಹಳಷ್ಟು ವ್ಯತ್ಯಾಸವಿದೆ. ಸರ್ಕಾರ ನೀಡಿದ ಕೋವಿಡ್ ಸಾವಿನ ದತ್ತಾಂಶಗಳೊಂದಿಗೆ ಈ ಸಂಖ್ಯೆ ತಾಳೆಯಾಗುವುದಿಲ್ಲವೆಂದು ಹಲವು ಸಂಶೋಧಕರು ಹೇಳಿದ್ದರು. ಅದಾಗ್ಯೂ, ಸರ್ಕಾರ ಈ ಎಲ್ಲಾ ವರದಿಗಳನ್ನು ಅಲ್ಲಗೆಳೆದಿತ್ತು, ಇದೀಗ ವಿಶ್ವ ಆರೋಗ್ಯ ಸಂಸ್ಥೆಯೇ ಭಾರತ ಸರ್ಕಾರ ನೀಡಿರುವ ಕೋವಿಡ್ ಸಾವು ದತ್ತಾಂಶವನ್ನು ನಿರಾಕರಿಸಿದೆ ಎಂದು ವರದಿ ಆಗಿದೆ.
WHO ದ ನೂತನ ವರದಿಯನ್ನು ತಯಾರಿಸಿದ ತಂಡದ ಇಬ್ಬರು ಸದಸ್ಯರನ್ನು TheWireScience ತಂಡವು ಸಂಪರ್ಕಿಸಿದ್ದು, 2020 ರಿಂದ ಭಾರತ ಸರ್ಕಾರವು ಕೋವಿಡ್ ಸಾವುಗಳ ಬಗ್ಗೆ ನೀಡಿದ ಅಂಕಿ ಅಂಶಗಳಿಗೂ ಅವರ ಸಂಶೋಧನೆಯ ಅಂಕಿ ಅಂಶಕ್ಕೂ ಅಜಗಜಾಂತರ ವ್ಯತ್ಯಾಸ ಇರುವುದನ್ನು ಅವರು ಒಪ್ಪಿದ್ದಾರೆ.