ನವದೆಹಲಿ: ಹನುಮಾನ್ ಜಯಂತಿ ಮೆರವಣಿಗೆ ವೇಳೆ ದೆಹಲಿಯ ಜಹಾಂಗೀರ್ ಪುರಿಯಲ್ಲಿ ಭಾರೀ ಹಿಂಸಾಚಾರ ಪ್ರಕರಣದ ಪ್ರಮುಖ ಆರೋಪಿಯನ್ನ ದೆಹಲಿ ಪೊಲೀಸ್ ಕ್ರೈಂ ಬ್ರಾಂಚ್ ಗುರುವಾರ ಪಶ್ಚಿಮ ಬಂಗಾಳದಲ್ಲಿ ಬಂಧಿಸಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಕೋಮು ಘರ್ಷಣೆಯ ಮೋಸ್ಟ್ ವಾಂಟೆಡ್ ಆರೋಪಿಯನ್ನು ಫರೀದ್ ಅಲಿಯಾಸ್ ನೀತು ಎಂದು ಗುರುತಿಸಲಾಗಿದೆ.
ಈತ ಕೋಮುಗಲಭೆಯಲ್ಲಿ ಅತ್ಯಂತ ಸಕ್ರಿಯವಾಗಿ ತೊಡಗಿಸಿಕೊಂಡಿದ್ದ ಮತ್ತು ಪ್ರಮುಖ ಪಾತ್ರ ವಹಿಸಿದ್ದ. ಪಶ್ಚಿಮ ಬಂಗಾಳದಲ್ಲಿ ನಿಯೋಜಿಸಲಾಗಿರುವ ನಮ್ಮ ಹಲವಾರು ತಂಡಗಳು ಗುರುವಾರ ತಮ್ಲುಕ್ ಹಳ್ಳಿಯಲ್ಲಿರುವ ಆತನ ಚಿಕ್ಕಮ್ಮನ ಮನೆಯಿಂದ ಅವರನ್ನು ಬಂಧಿಸಿವೆ. ಇಂದು ವಿಮಾನದ ಮೂಲಕ ನವದೆಹಲಿಗೆ ಕರೆತರಲಾಗುತ್ತಿದೆ” ಎಂದು ಪೊಲೀಸ್ ಮೂಲ ತಿಳಿಸಿದೆ.
ಆರೋಪಿ ವಿರುದ್ಧ 2010 ರಿಂದ ದರೋಡೆ, ಕಳ್ಳತನ ಮತ್ತು ಶಸ್ತ್ರಾಸ್ತ್ರ ಕಾಯ್ದೆಯಡಿಯಲ್ಲಿ ಆರು ಪ್ರಕರಣಗಳು ದಾಖಲಾಗಿವೆ ಮತ್ತು ಜಹಾಂಗೀರ್‌ಪುರಿ ಪ್ರದೇಶದಲ್ಲಿ ಅವನು ಪದೇ ಪದೇ ಅಪರಾಧ ಕೃತ್ಯಗಳನ್ನೆಸಗುತ್ತಿದ್ದ ಎಂದು ತಿಳಿದುಬಂದಿದೆ.
ಏಪ್ರಿಲ್ 16 ರಂದು ರಾಷ್ಟ್ರ ರಾಜಧಾನಿಯ ಜಹಾಂಗೀರ್‌ಪುರಿಯಲ್ಲಿ ಹನುಮಾನ್ ಜಯಂತಿ ಮೆರವಣಿಗೆಯಲ್ಲಿ ಎರಡು ಸಮುದಾಯಗಳ ನಡುವೆ ಘರ್ಷಣೆ ಸಂಭವಿಸಿದ್ದು, ಎಂಟು ಪೊಲೀಸ್ ಸಿಬ್ಬಂದಿ ಮತ್ತು ಸ್ಥಳೀಯ ನಿವಾಸಿ ಗಾಯಗೊಂಡಿದ್ದಾರೆ. ಘರ್ಷಣೆಯ ಸಮಯದಲ್ಲಿ ಕಲ್ಲು ತೂರಾಟ ನಡೆಸಿ ಬೆಂಕಿ ಹಚ್ಚಲಾಗಿತ್ತು. ಹಿಂಸಾಚಾರದ ಕೆಲವು ದಿನಗಳ ನಂತರ, ದೆಹಲಿ ಪೊಲೀಸ್ ಕಮಿಷನರ್ ರಾಕೇಶ್ ಅಸ್ತಾನಾ ಅವರು ಪ್ರಕರಣದ ಪ್ರಮುಖ ಆರೋಪಿಗಳ ವಿರುದ್ಧ ಅಕ್ರಮ ಹಣ ವರ್ಗಾವಣೆ ಆರೋಪಗಳನ್ನು ತನಿಖೆ ಮಾಡಲು ಜಾರಿ ನಿರ್ದೇಶನಾಲಯಕ್ಕೆ ಪತ್ರ ಬರೆದಿದ್ದಾರೆ.
ಪ್ರಕರಣದ ಐವರು ಆರೋಪಿಗಳ ವಿರುದ್ಧ ಪೊಲೀಸರು ಕಠಿಣ ರಾಷ್ಟ್ರೀಯ ಭದ್ರತಾ ಕಾಯ್ದೆಯನ್ನು ಹಾಕಿದ್ದಾರೆ.