ನವದೆಹಲಿ: ಜವಾಹರ ಲಾಲ್ ನೆಹರೂ ವಿಶ್ವವಿದ್ಯಾಲಯದ (ಜೆಎನ್‌ಯು) ಮುಖ್ಯದ್ವಾರ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಹಿಂದೂ ಸೇನಾ ಸಂಘಟನೆಯು ಪೋಸ್ಟರ್‌ಗಳನ್ನು ಅಂಟಿಸಿ, ಕೇಸರಿ ಧ್ವಜಗಳನ್ನು ನೆಟ್ಟಿದ್ದು, 'ಕೇಸರಿಗೆ ಅವಮಾನ ಮಾಡಿದರೆ ಕಠಿಣ ಕ್ರಮ ಎದುರಿಸಬೇಕಾಗುತ್ತದೆ' ಎಂದೂ ಶುಕ್ರವಾರ ಎಚ್ಚರಿಕೆ ನೀಡಿದೆ.
ಶ್ರೀರಾಮನವಮಿಯಂದು ಜೆಎನ್‌ಯುನ ಹಾಸ್ಟೆಲ್‌ನಲ್ಲಿ ಮಾಂಸಾಹಾರ ನೀಡಿದ ಆರೋಪದ ಮೇರೆಗೆ ಘರ್ಷಣೆ ನಡೆದಿತ್ತು. ಇದಾಗಿ ಒಂದು ವಾರದ ನಂತರ ಈ ರೀತಿಯ ಘಟನೆ ನಡೆದಿದೆ.
'ಬಲಪಂಥೀಯ ಸಂಘಟನೆಯ ರಾಷ್ಟ್ರೀಯ ಉಪಾಧ್ಯಕ್ಷ ಸುರ್ಜಿತ್ ಸಿಂಗ್ ಯಾದವ್ ಅವರು 'ಭಾಗವಾ (ಕೇಸರಿ) ಜೆಎನ್‌ಯು' ಶೀರ್ಷಿಕೆಯ ಪೋಸ್ಟರ್‌ಗಳನ್ನು ಹಚ್ಚಿದ್ದಾರೆ' ಎಂದು ಹಿಂದೂ ಸೇನಾ ಸಂಘಟನೆಯ ಮುಖ್ಯಸ್ಥ ವಿಷ್ಣು ಗುಪ್ತಾ ಹೇಳಿದ್ದಾರೆ.
ವ್ಯಾಟ್ಸ್‌ಆಯಪ್‌ನಲ್ಲಿ ಪ್ರಸಾರವಾದ ವಿಡಿಯೊದಲ್ಲಿ ಗುಪ್ತಾ ಅವರು ಹಿಂದಿ ಭಾಷೆಯಲ್ಲಿ, 'ಜೆಎನ್‌ಯು ಕ್ಯಾಂಪಸ್‌ನಲ್ಲಿ ನಿತ್ಯವೂ ಕೇಸರಿ ಬಣ್ಣಕ್ಕೆ ಅವಮಾನ ಮಾಡಲಾಗುತ್ತಿದೆ. ಇದನ್ನು ಮಾಡುತ್ತಿರುವವರಿಗೆ ಎಚ್ಚರಿಕೆ ನೀಡಲು ನಾವು ಬಯಸುತ್ತೇವೆ. ನಾವು ಇದನ್ನು ಸಹಿಸುವುದಿಲ್ಲ. ನಾವು ನಿಮ್ಮ ಸಿದ್ಧಾಂತ ಮತ್ತು ಪ್ರತಿಯೊಂದು ಧರ್ಮವನ್ನೂ ಗೌರವಿಸುತ್ತೇವೆ. ಆದರೆ, ಕೇಸರಿಗೆ ಅವಮಾನ ಮಾಡಿದರೆ ಕಠಿಣ ಕ್ರಮ ಎದುರಿಸಬೇಕಾಗುತ್ತದೆ' ಎಂದು ಎಚ್ಚರಿಕೆ ನೀಡಿದ್ದಾರೆ.
'ಜೆಎನ್‌ಯು ರಸ್ತೆ ಮತ್ತು ಅಕ್ಕಪಕ್ಕದ ಪ್ರದೇಶಗಳಲ್ಲಿ ಶುಕ್ರವಾರ ಕೆಲವು ಧ್ವಜ ಮತ್ತು ಬ್ಯಾನರ್‌ಗಳನ್ನು ಹಾಕಿರುವುದು ಗಮನಕ್ಕೆ ಬಂದಿತು. ಇತ್ತೀಚಿನ ಘಟನೆಯ ಕಾರಣ ಮತ್ತು ಸೂಕ್ತ ಕಾನೂನು ಕ್ರಮದಿಂದಾಗಿ ಅವುಗಳನ್ನು ತಕ್ಷಣವೇ ತೆಗೆದುಹಾಕಲಾಗಿದೆ' ಎಂದು ಉಪ ಪೊಲೀಸ್ ಆಯುಕ್ತ (ನೈರುತ್ಯ) ಮನೋಜ್ ಸಿ. ತಿಳಿಸಿದ್ದಾರೆ.
ಆದರೆ, 'ಧ್ವಜ ಕೀಳಲು ಪೊಲೀಸರು ಅವಸರ ಪಡಬಾರದು. ಕೇಸರಿ ಬಣ್ಣವು ಭಯೋತ್ಪಾದನೆಯ ಸಂಕೇತವಲ್ಲ, ಕೇಸರಿ ಮತ್ತು ಹಿಂದುತ್ವವನ್ನು ರಕ್ಷಿಸುವುದು ಕಾನೂನಿನ ಅಡಿಯಲ್ಲಿ ಹಕ್ಕಿನ ವಿಷಯವಾಗಿದೆ' ಎಂದು ಹಿಂದೂ ಸೇನಾ ಸಂಘಟನೆ ಹೇಳಿದೆ.