ಹೈದರಾಬಾದ್: ಬಂಜಾರಾ ಹಿಲ್ಸ್ ನ ಪಂಚತಾರಾ ಹೋಟೆಲ್‌ನ ಪಬ್‌ನಲ್ಲಿ ಮುಂಜಾನೆ ರೇವ್ ಪಾರ್ಟಿಯನ್ನು ಹೈದರಾಬಾದ್ ಪೊಲೀಸರ ಟಾಸ್ಕ್ ಫೋರ್ಸ್ ತಂಡ ಬೇಧಿಸಿದೆ.
ಪೊಲೀಸರ ದಾಳಿಯಲ್ಲಿ ವಿಐಪಿಗಳು, ಚಿತ್ರ ನಟರು ಮತ್ತು ರಾಜಕಾರಣಿಗಳ ಮಕ್ಕಳು ಸೇರಿದಂತೆ ಸುಮಾರು 142 ಜನರನ್ನು ಕಸ್ಟಡಿಗೆ ತೆಗೆದುಕೊಳ್ಳಲಾಗಿದೆ. ರೇವ್ ಪಾರ್ಟಿಯಲ್ಲಿ ಕೊಕೇನ್ ಸೇರಿದಂತೆ ನಿಷೇಧಿತ ಡ್ರಗ್ಸ್ ಪದಾರ್ಥಗಳು ಪತ್ತೆಯಾಗಿವೆ ಎಂದು ವರದಿಯಾಗಿದೆ.
ಪೊಲೀಸ್ ವಶಕ್ಕೆ ಸಿಕ್ಕವರಲ್ಲಿ ನಟ ನಾಗಬಾಬು ಅವರ ಪುತ್ರಿ, ಮೆಗಾಸ್ಟಾರ್ ಚಿರಂಜೀವಿ ಅವರ ಸೊಸೆ ನಿಹಾರಿಕಾ ಕೊನಿಡೇಲಾ ಕೂಡ ಸೇರಿದ್ದಾರೆ. ನಾಗಬಾಬು ಅವರು ತಮ್ಮ ಮಗಳಿಗೆ ಡ್ರಗ್ಸ್ ಪತ್ತೆ ಪ್ರಕರಣದಲ್ಲಿ ಯಾವುದೇ ಸಂಬಂಧವಿಲ್ಲ ಎಂದು ವಿಡಿಯೋ ಬಿಡುಗಡೆ ಮಾಡಿದ್ದಾರೆ.
ಜೊತೆಗೆ ಗಾಯಕ ಮತ್ತು ಬಿಗ್ ಬಾಸ್ ತೆಲುಗು ರಿಯಾಲಿಟಿ ಶೋನ ಮೂರನೇ ಸೀಸನ್ ನ ವಿಜೇತ ರಾಹುಲ್ ಸಿಪ್ಲಿಗುಂಜ್ ಕೂಡ ಸೇರಿದ್ದಾರೆ. ಫೆಬ್ರವರಿ 12 ರಂದು ಹೈದರಾಬಾದ್ ಪೊಲೀಸರು ಡ್ರಗ್ಸ್ ವಿರುದ್ಧ ಅಭಿಯಾನವನ್ನು ಪ್ರಾರಂಭಿಸಿದಾಗ ನಿಹಾರಿಕಾ ಕೊನಿಡೇಲಾ ಅವರು ಥೀಮ್ ಹಾಡನ್ನು ಹಾಡಿದ್ದರು.
ಪಾರ್ಟಿಯಲ್ಲಿದ್ದ ಇತರರಲ್ಲಿ ಆಂಧ್ರಪ್ರದೇಶದ ಉನ್ನತ ಪೋಲೀಸರೊಬ್ಬರ ಮಗಳು ಮತ್ತು ರಾಜ್ಯದ ತೆಲುಗು ದೇಶಂ ಸಂಸದರ ಮಗ ಕೂಡ ಇದ್ದರು. ತೆಲಂಗಾಣದ ಕಾಂಗ್ರೆಸ್ ನಾಯಕ ಅಂಜನ್ ಕುಮಾರ್ ಯಾದವ್, ತನ್ನ ಮಗ ಹುಟ್ಟುಹಬ್ಬದ ಪಾರ್ಟಿಗೆ ಹೋಗಿದ್ದಾನೆ. ಪ್ರಕರಣದಲ್ಲಿ ಸುಳ್ಳನ್ನ ಹಬ್ಬಿಸಲಾಗುತ್ತಿದೆ. ನಗರದ ಎಲ್ಲಾ ಪಬ್‌ಗಳನ್ನು ಮುಚ್ಚಬೇಕು ಎಂದು ಆರೋಪಿಸಿದರು. ಖಮ್ಮಂ ಜಿಲ್ಲೆಯ ಮಾಜಿ ಸಂಸದರ ಮಗಳ ಒಡೆತನದ ಹೋಟೆಲ್‌ನಲ್ಲಿರುವ ಪಬ್ ಪಾರ್ಟಿಗಳಿಗೆ ಜನಪ್ರಿಯವಾಗಿದೆ.