ದೆಹಲಿ: ಕೋವಿಡ್ -19 ಪ್ರಕರಣಗಳು ಸ್ವಲ್ಪ ಹೆಚ್ಚಾಗುತ್ತಿರುವುದನ್ನು ಗಮನದಲ್ಲಿಟ್ಟುಕೊಂಡು ದೆಹಲಿ ಸರ್ಕಾರ ಶೀಘ್ರದಲ್ಲೇ ಶಾಲೆಗಳಿಗೆ ಹೊಸ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಲಿದೆ ಎಂದು ದೆಹಲಿ ಉಪ ಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಗುರುವಾರ ಹೇಳಿದ್ದಾರೆ.
"ಕೊರೋನಾ ಪಾಸಿಟಿವ್ ಪ್ರಕರಣಗಳ ಸಂಖ್ಯೆಯಲ್ಲಿ ಸ್ವಲ್ಪ ಹೆಚ್ಚಾಗಿದೆ. ಆದರೆ ಆಸ್ಪತ್ರೆಗೆ ದಾಖಲಾಗುತ್ತಿರುವವರ ಸಂಖ್ಯೆ ಏರಿಕೆಯಾಗಿಲ್ಲ. ಆದ್ದರಿಂದ ನಾವು ಆತಂಕಪಡುವ ಅಗತ್ಯವಿಲ್ಲ. ಆದರೆ ಎಚ್ಚರದಿಂದಿರಿ. ನಾವು ಕೋವಿಡ್ ನೊಂದಿಗೆ ಬದುಕಲು ಕಲಿಯಬೇಕಾಗಿದೆ. ನಾವು ನಿರಂತರವಾಗಿ ಪರಿಸ್ಥಿತಿಯ ಮೇಲ್ವಿಚಾರಣೆ ಮಾಡುತ್ತಿದ್ದೇವೆ" ಎಂದು ಸಿಸೋಡಿಯಾ ಸುದ್ದಿಗಾರರಿಗೆ ತಿಳಿಸಿದ್ದಾರೆ.
"ಕಳೆದ ಕೆಲವು ದಿನಗಳಿಂದ ನಾನು ಕೆಲವು ಶಾಲೆಗಳ ಬಗ್ಗೆ ವರದಿ ಪಡೆದುಕೊಂಡಿದ್ದೇನೆ. ಅಲ್ಲಿ ಪೆÇೀಷಕರು ತಮ್ಮ ಮಗುವಿಗೆ ಕೊರೋನಾ ಪಾಸಿಟಿವ್ ಬಂದ ಬಗ್ಗೆ ಮಾಹಿತಿ ನೀಡಿದ್ದಾರೆ. ಈ ನಿಟ್ಟಿನಲ್ಲಿ ಶಿಕ್ಷಣ ಇಲಾಖೆ ನಾಳೆ ಶಾಲೆಗಳಿಗೆ ಹೊಸ ಮಾರ್ಗಸೂಚಿಗಳನ್ನು ನೀಡಲಿದೆ" ಎಂದಿದ್ದಾರೆ.
ದೆಹಲಿಯಲ್ಲಿ ಬುಧವಾರ 299 ಹೊಸ ಕೊರೋನಾ ಪಾಸಿಟಿವ್ ಪ್ರಕರಣಗಳು ವರದಿಯಾಗಿದ್ದು, ಕಳೆದ ಎರಡು ದಿನಗಳಲ್ಲಿ ಪ್ರಕರಣಗಳ ಸಂಖ್ಯೆ ಶೇ.118ರಷ್ಟು ಏರಿಕೆಯಾಗಿದೆ. ನಗರ ಆರೋಗ್ಯ ಇಲಾಖೆ ಹಂಚಿಕೊಂಡಿರುವ ಅಂಕಿಅಂಶಗಳ ಪ್ರಕಾರ ಪಾಸಿಟಿವ್ ಪ್ರಮಾಣ ಶೇಕಡಾ 2.49 ರಷ್ಟಿದೆ.
ಕೊವಿಡ್-19 ಪ್ರಕರಣಗಳು ಕಡಿಮೆಯಾದಂತೆ ಕಂಡರೂ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಕೋವಿಡ್ ಪ್ರಕರಣಗಳಲ್ಲಿ ದಿಢೀರ್ ಏರಿಕೆ ಕಾಣುತ್ತಿದೆ. ಇದರಿಂದ ನಾಲ್ಕನೇ ಅಲೆಯ ಭೀತಿ ಎಲ್ಲರಲ್ಲೂ ಮನೆ ಮಾಡಿದೆ. ಇದೀಗ ದೆಹಲಿಯ ಎನ್ ಸಿಆರ್ ಸೇರಿಂದತೆ ವಿವಿಧೆಡೆ ಶಾಲೆಗಳಲ್ಲಿ ಶಿಕ್ಷಕರಿಗೆ ಮತ್ತು ಮಕ್ಕಳಿಗೆ ಕೊರೋನಾ ಕಾಣಿಸಿಕೊಂಡಿದೆ.
ದೆಹಲಿಯಲ್ಲಿ, ವಿದ್ಯಾರ್ಥಿ ಮತ್ತು ಶಿಕ್ಷಕರಿಗೆ ಕೋವಿಡ್ -19 ಕಾಣಿಸಿಕೊಂಡ ನಂತರ ಖಾಸಗಿ ಶಾಲೆಯ ವಿದ್ಯಾರ್ಥಿಗಳನ್ನು ಮನೆಗೆ ಕಳುಹಿಸಲಾಗಿದೆ. ಮುನ್ನೆಚ್ಚರಿಕೆ ಕ್ರಮವಾಗಿ, ಇತರರಿಗೆ ಸೋಂಕು ತಗುಲದಂತೆ ಮತ್ತು ಮತ್ತಷ್ಟು ಹರಡುವುದನ್ನು ತಡೆಯುವ ಸಲುವಾಗಿ ಶಾಲಾ ಆಡಳಿತವು ಎಲ್ಲಾ ವಿದ್ಯಾರ್ಥಿಗಳಿಗೆ ರಜೆ ನೀಡಿದೆ.