ನವದೆಹಲಿ: ನಿಗದಿತ ಅವಧಿಗೂ ಮುನ್ನವೇ ಸಂಸತ್ ನ ಬಜೆಟ್ ಅಧಿವೇಶನವನ್ನು ಮುಕ್ತಾಯಗೊಳಿಸಿರುವುದನ್ನು ಕಾಂಗ್ರೆಸ್ ಪ್ರಶ್ನಿಸಿದೆ.
ಬಿಜೆಪಿ ಸರ್ಕಾರ ಬೆಲೆ ಏರಿಕೆಯ ಚರ್ಚೆಯಿಂದ ಪಲಾಯನ ಮಾಡುತ್ತಿದೆ. ಬೆಲೆ ಏರಿಕೆಯ ಬಗ್ಗೆ ಚರ್ಚೆ ನಡೆಸುವುದು ವಿಪಕ್ಷಗಳ ಒಕ್ಕೊರಲ ಆಗ್ರಹವಾಗಿತ್ತು.
ಲೋಕಸಭೆಯ ಕಲಾಪ ಸಲಹಾ ಸಮಿತಿ (ಬಿಎಸಿ) ಸಭೆಯಲ್ಲಿ ಸರ್ಕಾರ ಬೆಲೆ ಏರಿಕೆ ಬಗ್ಗೆ ಚರ್ಚೆ ನಡೆಸಲು ಸಮಯ ನಿಗದಿಪಡಿಸಿತ್ತು. ಆದರೆ ಈಗ ಅದಕ್ಕೆ ಅವಕಾಶ ನೀಡಿಲ್ಲ. ಸರ್ಕಾರ ಈ ಮೂಲಕ ಬದ್ಧತೆಯನ್ನು ಮರೆತಿದೆ ಎಂದು ಕಾಂಗ್ರೆಸ್ ನಾಯಕ ಅಧಿರ್ ರಂಜನ್ ಚೌಧರಿ ಆರೋಪಿಸಿದ್ದಾರೆ.
ರಾಜ್ಯಸಭೆಯ ವಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದು, ಸರ್ಕಾರ ಚರ್ಚೆಯಿಂದ ಓಡಿಹೋಗುತ್ತಿದೆ. ಆದರೆ ಬೆಲೆ ಏರಿಕೆಯ ವಿಷಯವನ್ನು ಜನರ ಬಳಿ ಕೊಂಡೊಯ್ಯುವುದಾಗಿ ತಿಳಿಸಿದ್ದಾರೆ.