ಮಂಗಳೂರು: ಎಸ್‌ಇಝೆಡ್ (ವಿಶೇಷ ಆರ್ಥಿಕ ವಲಯ) ವ್ಯಾಪ್ತಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಮೀನಿನ ಕಾರ್ಖಾನೆಯಲ್ಲಿ ವಿಷಾನಿಲ ಸೋರಿಕೆಯಾಗಿ ಐವರು ಕಾರ್ಮಿಕರು ಮೃತಪಟ್ಟಿರುವ ಹೃದಯ ವಿದ್ರಾವಕ ಘಟನೆ ಮಂಗಳೂರಿನಲ್ಲಿ ಭಾನುವಾರ ರಾತ್ರಿ ನಡೆದಿದೆ.
ಪಶ್ಚಿಮ ಬಂಗಾಳ ಮೂಲದ ಮಹಮ್ಮದ್ ಸಮೀರುಲ್ಲಾ, ಉಮರ್ ಫಾರೂಕ್, ನಿಜಾಮುದ್ದೀನ್ ಅಲಿಸ್, ಮಿರಾಜುಲ್ ಇಸ್ಲಾಂ ಮತ್ತು ಸರಾಫತ್ ಅಲಿ ಮೃತಪಟ್ಟ ಐವರು ವ್ಯಕ್ತಿಗಳಾಗಿದ್ದಾರೆ.
ಮೂವರನ್ನು ಹಸನ್ ಅಲಿ, ಕರಿಬುಲ್ಲಾ ಮತ್ತು ಅಫ್ತಲ್ ಮಲಿಕ್ ಸೇರಿದಂತೆ ಹಲವು ಕಾರ್ಮಿಕರ ಸ್ಥಿತಿ ಗಂಭೀರವಾಗಿದ್ದು, ಅಸ್ವಸ್ಥ ಕಾರ್ಮಿಕರಿಗೆ ನಗರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ ಎಂದು ವರದಿಗಳು ತಿಳಿಸಿವೆ.
ದುರಂತ ನಡೆದ ಪ್ರದೇಶವು ಬಜ್ಪೆ ಪೊಲೀಸ್ ಠಾಣಾ ವ್ಯಾಪ್ತಿಗೆ ಬರಲಿದ್ದು, ಸ್ಥಳಕ್ಕೆ ಡಿಸಿಪಿ ಹರಿರಾಂ ಶಂಕರ್ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ.
ಭಾನುವಾರ ರಾತ್ರಿ ಕಾರ್ಮಿಕನೊಬ್ಬ ಮೀನಿನ ತ್ಯಾಜ್ಯದ ಟ್ಯಾಂಕ್ ಶುಚಿಗೊಳಿಸಲು ಕೆಳಗಿಳಿದಿದ್ದು, ಈ ವೇಳೆ ಅಸ್ವಸ್ಥಗೊಂಡು ಬಿದ್ದಿದ್ದಾನೆ. ಆತನನ್ನು ರಕ್ಷಣೆ ಮಾಡಲೆಂದು ಹೋದ 8 ಮಂದಿಯ ಉಸಿರಾಟ ಕೂಡ ಏರುಪೇರಾಗಿದೆ ಎನ್ನಲಾಗಿದೆ.
ಕಾರ್ಖಾನೆಗೆ ವಿವಿಧೆಡೆಯಿಂದ ಬರುವ ಮೀನಿನ ತ್ಯಾಜ್ಯವನ್ನು ಈ ಬೃಹತ್ ಟ್ಯಾಂಕ್ನಲ್ಲಿ ಮೊದಲು ಇರಿಸಿ, ಶುದ್ಧೀಕರಿಸಲಾಗುತ್ತಿತ್ತು. ಇದು ಸುಮಾರು 20 ಅಡಿ ಆಳವಾಗಿದೆ.
ಮೀನಿನ ತ್ಯಾಜ್ಯವನ್ನು ಸಂಸ್ಕರಿಸುವಾಗ ಬಳಕೆ ಮಾಡುವ ವಿಷಾನಿಲ ಸೋರಿಕೆಯಿಂದ ಈ ದುರ್ಘಟನೆ ನಡೆದಿರಬಹುದು ಎಂದು ಶಂಕಿಸಲಾಗಿದೆ. ಆದರೆ ನಿರ್ದಿಷ್ಟ ಕಾರಣ ತಿಳಿದುಬಂದಿಲ್ಲ. ಅವಘಡ ನಡೆದ ಹಿನ್ನಲೆಯಲ್ಲಿ ಫ್ಯಾಕ್ಟರಿ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಲಾಗಿದೆ.
ಪ್ರಕರಣ ಸಂಬಂಧ ಪೊಲೀಸರು ಐಪಿಸಿ ಸೆಕ್ಷನ್ 304, 304 ಆರ್/ಡಬ್ಲ್ಯು 34, 337, 338 ಅಡಿಯಲ್ಲಿ ಪ್ರಕರಣ ದಾಖಲಿಸಿದ್ದು, ಕಂಪನಿಯ ಪ್ರೊಡಕ್ಷನ್ ಮ್ಯಾನೇಜರ್ ರೂಬಿ ಜೋಸೆಫ್, ಏರಿಯಾ ಮ್ಯಾನೇಜರ್ ಕುಭೇರ್ ಗಡೆ, ಮೇಲ್ವಿಚಾರಕ ಮೊಹಮ್ಮದ್ ಅನ್ವರ್ ಮತ್ತು ಕಾರ್ಮಿಕ ಸುರಕ್ಷತಾ ಮೇಲ್ವಿಚಾರಕ ಫಾರೂಕ್ ಅವರನ್ನು ಬಂಧನಕ್ಕೊಳಪಡಿಸಿದ್ದಾರೆ.
ಭಾನುವಾರ ಸಂಜೆ 6 ಗಂಟೆ ಸುಮಾರಿಗೆ ಕಾರ್ಖಾನೆಯ 20 ಅಡಿ ಆಳದ ತ್ಯಾಜ್ಯ ನೀರಿನ ತೊಟ್ಟಿಗೆ ಕಾರ್ಮಿಕ ನಿಜಾಮುದ್ದೀನ್ ಇಳಿದಿದ್ದು, ಈ ವೇಳೆ ಅಸ್ವಸ್ಥಗೊಂಡು ಬಿದ್ದಿದ್ದಾರೆ. ಬಳಿಕ ಉಳಿದ ಕಾರ್ಮಿಕರು ರಕ್ಷಣೆಗೆ ಮುಂದಾಗಿದ್ದು, ಎಲ್ಲರೂ ಅಸ್ವಸ್ಥಗೊಂಡಿದ್ದಾರೆಂದು ಎಂದು ಮಂಗಳೂರು ನಗರ ಪೊಲೀಸ್ ಆಯುಕ್ತ ಎನ್.ಶಶಿಕುಮಾರ್ ತಿಳಿಸಿದ್ದಾರೆ.
ಮುಂಬೈ ಮೂಲದ ರಾಜು ಗೋರಕ್ ಒಡೆತನದ ಈ ಕಾರ್ಖಾನೆಯು ವಿವಿಧ ಸುರಕ್ಷತಾ ನಿಯಮಗಳನ್ನು ಉಲ್ಲಂಘನೆ ಮಾಡಿರುವುದು ಘಟನೆಯಿಂದ ತಿಳಿದುಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ತ್ಯಾಜ್ಯ ನೀರನ್ನು ಪ್ರತಿನಿತ್ಯ ತೆರವುಗೊಳಿಸುತ್ತಿರಲಿಲ್ಲ. ನೀರಿನಲ್ಲಿ ಮುಳುಗಿ ಸಾವು ಸಂಭವಿಸಿದೆ ಎಂದು ಮೂಲಗಳು ತಿಳಿಸಿದ್ದರೂ, ಸಾವಿಗೆ ಕಾರಣ ಇನ್ನೂ ಸ್ಪಷ್ಟವಾಗಿಲ್ಲ ಎಂದು ಪೊಲೀಸ್ ಆಯುಕ್ತರು ತಿಳಿಸಿದ್ದಾರೆ.
ಕಾರ್ಖಾನೆಯಲ್ಲಿ ಸುಮಾರು 100 ಕಾರ್ಮಿಕರು ಕೆಲಸ ಮಾಡುತ್ತಿದ್ದಾರೆ, ಅವರಲ್ಲಿ ಹೆಚ್ಚಿನವರು ಪಶ್ಚಿಮ ಬಂಗಾಳ, ಜಾರ್ಖಂಡ್ ಮತ್ತು ಬಿಹಾರದಿಂದ ಬಂದವರಾಗಿದ್ದಾರೆಂದು ತಿಳಿದುಬಂದಿದೆ.