ಪಾಲಕ್ಕಾಡ್: ಪಾಲಕ್ಕಾಡ್ ಜಿಲ್ಲೆಯಲ್ಲಿ ಉದ್ವಿಗ್ನ ಪರಿಸ್ಥಿತಿ ಹಿನ್ನೆಲೆಯಲ್ಲಿ ನಿಷೇಧಾಜ್ಞೆ ಮುಂದುವರಿಯಲಿದೆ. ಭಾನುವಾರದವರೆಗೆ ನಿಷೇಧಾಜ್ಞೆ ವಿಸ್ತರಿಸಿ ಜಿಲ್ಲಾಡಳಿತ ಆದೇಶ ಹೊರಡಿಸಿದೆ. ಆರ್‍ಎಸ್‍ಎಸ್ ಮುಖಂಡ ಶ್ರೀನಿವಾಸನ್ ಹತ್ಯೆಯ ನಂತರ ವಿಧಿಸಲಾಗಿದ್ದ ನಿಷೇಧಾಜ್ಞೆಯನ್ನು ಇನ್ನೂ ನಾಲ್ಕು ದಿನಗಳವರೆಗೆ ವಿಸ್ತರಿಸಲಾಗಿದ್ದು, ಅದು ನಿನ್ನೆ ಸಂಜೆ 6 ಗಂಟೆಗೆ ಕೊನೆಗೊಳ್ಳಲಿತ್ತು.
ಮತ್ತೆ ಘರ್ಷಣೆಯಾಗುವ ಸಾಧ್ಯತೆಯ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ನಿಷೇಧಾಜ್ಞೆಯನ್ನು ವಿಸ್ತರಿಸಿದೆ. ಸಾರ್ವಜನಿಕ ಸ್ಥಳಗಳಲ್ಲಿ ಐದಕ್ಕಿಂತ ಹೆಚ್ಚು ಜನ ಸೇರುವಂತಿಲ್ಲ ಎಂದು ಆದೇಶದಲ್ಲಿ ತಿಳಿಸಲಾಗಿದೆ. ಸಾರ್ವಜನಿಕ ಕಾರ್ಯಕ್ರಮಗಳನ್ನು ಸಹ ನಿಷೇಧಿಸಲಾಗಿದೆ. ಶಸ್ತ್ರಾಸ್ತ್ರ ಕಾಯ್ದೆ 1818ರ ಸೆಕ್ಷನ್ 4ರ ಅಡಿಯಲ್ಲಿ ಸಾರ್ವಜನಿಕ ಸ್ಥಳಗಳಿಗೆ ಶಸ್ತ್ರಾಸ್ತ್ರಗಳೊಂದಿಗೆ ಪ್ರವೇಶಿಸುವವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದೂ ಆದೇಶದಲ್ಲಿ ತಿಳಿಸಲಾಗಿದೆ. ಜಿಲ್ಲೆಯಲ್ಲಿ ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸಲಾಗುತ್ತಿದೆ ಎಂದು ಪಾಲಕ್ಕಾಡ್ ಜಿಲ್ಲಾಡಳಿತ ತಿಳಿಸಿದೆ.
ಸದ್ಯ ಇಡೀ ಜಿಲ್ಲೆ ಪೋಲೀಸರ ಕಣ್ಗಾವಲಿನಲ್ಲಿದೆ. ಜಿಲ್ಲೆಯ ಗಡಿಗಳಲ್ಲಿಯೂ ಪೋಲೀಸ್ ತಪಾಸಣೆ ಜೋರಾಗಿದೆ. ಆರ್‍ಎಸ್‍ಎಸ್ ಮಾಜಿ ಶಾರೀರಿಕ್ ಪ್ರಮುಖ್ ಶ್ರೀನಿವಾಸ್ ಅವರನ್ನು ಪಾಪ್ಯುಲರ್ ಫ್ರಂಟ್ ಕಾರ್ಯಕರ್ತರು ಶನಿವಾರ ಹತ್ಯೆ ಮಾಡಿದ್ದರು. ಅದರ ಹಿಂದಿನ ದಿನ ಪಾಪ್ಯುಲರ್ ಪ್ರಂಟ್ ಕಾರ್ಯಕರ್ತನ ಕೊಲೆ ನಡೆದಿತ್ತು.