ನವದೆಹಲಿ: ಲೋಕಸಭೆಯಲ್ಲಿ ಕ್ರಿಮಿನಲ್ ಪ್ರೊಸೀಜರ್ (ಗುರುತಿಸುವಿಕೆ) ಮಸೂದೆ 2022 ಮಂಡನೆ ವೇಳೆ ಕೇಂದ್ರ ಸಚಿವ ಗೃಹ ಸಚಿವ ಅಮಿತ್ ಶಾ ಅವರು ತಮ್ಮ ಮಾತಿನಿಂದ ಸದನ ನಗೆಗಡಲಲ್ಲಿ ತೇಲುವಂತೆ ಮಾಡಿದರು.
ಮಸೂದೆ ಸಮರ್ಥನೆ ವೇಳೆ ಮಾತನಾಡಿದ ಅಮಿತ್ ಶಾ ಅವರು ತಮ್ಮ ಎತ್ತರದ ಧ್ವನಿ ಕೋಪವನ್ನು ಪ್ರತಿಬಿಂಬಿಸುವುದಿಲ್ಲ ಆದರೆ ಇದು ನನ್ನ ತಯಾರಿಕಾ ದೋಷ(ಮ್ಯಾನುಫ್ಯಾಕ್ಚರಿಂಗ್ ಡಿಫೆಕ್ಟ್) ಎಂದು ಹೇಳುತ್ತಿದ್ದಂತೆ ಸದನದ ಸದಸ್ಯರು ನಗೆಗಡಲಲ್ಲಿ ತೇಲಿದರು. ಕಾಶ್ಮೀರಕ್ಕೆ ಸಂಬಂಧಿಸಿದ ಪ್ರಶ್ನೆಗಳನ್ನು ಹೊರತುಪಡಿಸಿ ನಾನು ಕೋಪಗೊಳ್ಳುವುದಿಲ್ಲ ಎಂದು ಅವರು ಹೇಳಿದರು.
ಕ್ರಿಮಿನಲ್ ಪ್ರೊಸೀಜರ್ (ಗುರುತಿಸುವಿಕೆ) ಮಸೂದೆ 2022 ಅನ್ನು ಸದನದಲ್ಲಿ ಪರಿಗಣನೆಗೆ ಮತ್ತು ಅಂಗೀಕಾರಕ್ಕಾಗಿ ಮಂಡಿಸಿದ ಅಮಿತ್ ಶಾ, ಅಪರಾಧದ ತನಿಖೆಯನ್ನು ಹೆಚ್ಚು ಪರಿಣಾಮಕಾರಿಯಾಗಿ ಮತ್ತು ತ್ವರಿತವಾಗಿ ಮಾಡಲು ಮತ್ತು ಶಿಕ್ಷೆಯ ಪ್ರಮಾಣವನ್ನು ಹೆಚ್ಚಿಸುವ ಗುರಿಯನ್ನು ಈ ಮಸೂದೆ ಹೊಂದಿದೆ ಎಂದು ಹೇಳಿದರು. “ನಾನು ಯಾರನ್ನೂ ದೂಷಿಸುವುದಿಲ್ಲ. ನನ್ನ ಧ್ವನಿ ಸ್ವಲ್ಪ ಎತ್ತರದಲ್ಲಿದೆ. ಇದು ನನ್ನ ಉತ್ಪಾದನಾ ದೋಷವಾಗಿದೆ. ನಾನು ಕೋಪಗೊಳ್ಳುವುದಿಲ್ಲ, ಕಾಶ್ಮೀರಕ್ಕೆ ಸಂಬಂಧಿಸಿದ ಪ್ರಶ್ನೆಗಳನ್ನು ಕೇಳಿ,” ಅವರು ಹೇಳಿದರು.
ಸಂಸತ್ತು ಆಗಸ್ಟ್ 2019 ರಲ್ಲಿ ಜಮ್ಮು ಮತ್ತು ಕಾಶ್ಮೀರದಿಂದ 370 ನೇ ವಿಧಿಯನ್ನು ರದ್ದುಗೊಳಿಸುವ ಮಸೂದೆಯನ್ನು ಅಂಗೀಕರಿಸಿತು. ಮಸೂದೆ ಅಂಗೀಕಾರದ ವೇಳೆ ಅಮಿತ್ ಶಾ ಮತ್ತು ಕಾಂಗ್ರೆಸ್ ನಾಯಕ ಅಧೀರ್ ರಂಜನ್ ಚೌಧರಿ ನಡುವೆ ತೀವ್ರ ಮಾತಿನ ಚಕಮಕಿ ನಡೆಯಿತು.
ಅಪರಾಧ ಕೃತ್ಯಗಳಲ್ಲಿ ಬಂಧಿತರು, ಅಪರಾಧಿಗಳ ದೈಹಿಕ, ಜೈವಿಕ ಮಾದರಿ ಸಂಗ್ರಹಿಸಲು ಪೊಲೀಸರಿಗೆ ಶಾಸನಬದ್ಧ ಅಧಿಕಾರ ನೀಡುವ, ‘ಅಪರಾಧ ಪ್ರಕ್ರಿಯೆ (ಗುರುತಿಸುವಿಕೆ) ಮಸೂದೆ’ಯನ್ನು ಸರ್ಕಾರ ಲೋಕಸಭೆಯಲ್ಲಿ ಸಮರ್ಥಿಸಿಕೊಂಡಿದೆ.