'ಆದರೆ, ಚೀನಾ, ಟಿಬೆಟ್‌ಗೆ ಸಂಬಂಧಿಸಿದ ಭಾರತದ ನಿಲುವು 2014ರ ನಂತರ ಬದಲಾಗಿದೆ' ಎಂದೂ ಅವರು ಇದೇ ವೇಳೆ ಸುದ್ದಿಗಾರರಿಗೆ ತಿಳಿಸಿದರು.
ಜೋ ಬೈಡನ್ ಸರ್ಕಾರದ ಉನ್ನತ ಅಧಿಕಾರಿಗಳು ಮತ್ತು ಅಮೆರಿಕ ಕಾಂಗ್ರೆಸ್‌ನ ಸದಸ್ಯರ ಭೇಟಿಗಾಗಿ ಸೆರಿಂಗ್ ಅವರು ಅಮೆರಿಕ ಪ್ರವಾಸ ಕೈಗೊಂಡಿದ್ದಾರೆ.
ಈ ವೇಳೆ ಪತ್ರಕರ್ತರ ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದ ಅವರು, 'ಟಿಬೆಟ್‌ನ ಬಗ್ಗೆ ನೆಹರು ಅವರ ನಿರ್ಧಾರಗಳು ಅವರ ವಿಶ್ವ ದೃಷ್ಟಿಕೋನದ ಮೂಲದ್ದಾಗಿದ್ದವು. ಅವರು ಚೀನಾದ ಮೇಲೆ ಹೆಚ್ಚಿನ ನಂಬಿಕೆ ಮತ್ತು ವಿಶ್ವಾಸಗಳನ್ನು ಹೊಂದಿದ್ದರು' ಎಂದು ಅವರು ಹೇಳಿದರು.
'ಅವರ ಆ ನಿಲುವಿನ ಕಾರಣಕ್ಕಾಗಿ ಪಂಡಿತ್ ನೆಹರು ಅವರನ್ನು ಮಾತ್ರ ನಾನು ದೂಷಿಸುವುದಿಲ್ಲ. ಯಾವುದೇ ನಾಯಕನಿಗೆ ತನ್ನ ರಾಷ್ಟ್ರದ ಹಿತಾಸಕ್ತಿಯು ಮೊದಲ ಆದ್ಯತೆ ಆಗುತ್ತದೆ ಎಂದು ನಾನು ಅರ್ಥಮಾಡಿಕೊಂಡಿದ್ದೇನೆ. ಮತ್ತು, ಆ ಸಮಯದಲ್ಲಿ ನೆಹರು ಭಾರತಕ್ಕೆ ಉತ್ತಮ ಎನಿಸಿದ್ದನ್ನೇ ಮಾಡಿದ್ದರು' ಎಂದು ಸೆರಿಂಗ್ ಹೇಳಿದರು. ಭಾರತ ಮಾತ್ರವಲ್ಲದೆ ಇನ್ನೂ ಹಲವು ಸರ್ಕಾರಗಳು ಕೂಡ ಟಿಬೆಟ್ ಮೇಲಿನ ಚೀನಾದ ಸಾರ್ವಭೌಮತ್ವವನ್ನು ಒಪ್ಪಿಕೊಂಡಿದ್ದವು ಎಂದು ಪೆಂಪಾ ಸೆರಿಂಗ್ ಹೇಳಿದರು.
'ಈಗ ಹಲವರು ಪಂಡಿತ್ ನೆಹರು ತಪ್ಪು ಮಾಡಿದರೆಂದು ಭಾವಿಸುತ್ತಾರೆ. ವಾಸ್ತವವಾಗಿ ಅವರು ಚೀನಾವನ್ನು ತುಂಬಾ ನಂಬಿದ್ದರು. 1962 ರಲ್ಲಿ ಚೀನಾ ಭಾರತವನ್ನು ಆಕ್ರಮಿಸಿದಾಗ, ಅವರು ದಿಗ್ಭ್ರಾಂತರಾಗಿದ್ದರು. ಅವರ ಸಾವಿಗೆ ಇದೂ ಒಂದು ಕಾರಣ ಎಂದು ಕೆಲವರು ಹೇಳುತ್ತಾರೆ' ಎಂದು ಅವರು ತಿಳಿಸಿದರು.
'ಟಿಬೆಟ್ ಚೀನಾದ ಭಾಗ ಎಂಬ ವಾದವನ್ನು ಭಾರತ ಈಗ ಪ್ರತಿಪಾದಿಸುತ್ತಿಲ್ಲ. ಅದು, 2014ರ ನಂತರ ತನ್ನ ನೀತಿಯನ್ನು ಬದಲಾಯಿಸಿದೆ ಎಂದು ನಾನು ಭಾವಿಸುತ್ತೇನೆ. ಭಾರತವು ಅಖಂಡ ಚೀನಾ ತತ್ವಕ್ಕೆ ಬದ್ಧವಾಗಿರಬೇಕಿದ್ದರೆ, ಕಾಶ್ಮೀರಕ್ಕೆ ಸಂಬಂಧಿಸಿದಂತೆ ಚೀನಾ ಕೂಡ ಅಖಂಡ ಭಾರತ ತತ್ವವನ್ನು ಪಾಲಿಸಬೇಕು ಎಂಬುದು ಅದರ ನಿಲುವಾಗಿದೆ. ಹೀಗಾಗಿಯೇ ಟಿಬೆಟ್ ಮೇಲಿನ ಚೀನಾದ ಸಾರ್ವಭೌಮತ್ವ ವಿಚಾರದಲ್ಲಿ ಭಾರತದ ನಿಲುವು ಬದಲಾಗಿದೆ' ಎಂದು ಸೆರಿಂಗ್ ಹೇಳಿದರು.