ನವದೆಹಲಿ: ಆರ್ಥಿಕ ಸಹಕಾರ ಮತ್ತು ವ್ಯಾಪಾರ ಒಪ್ಪಂದಕ್ಕೆ ಭಾರತ ಮತ್ತು ಆಸ್ಟ್ರೇಲಿಯಾ ಶನಿವಾರ ಸಹಿ ಹಾಕಿವೆ. ಇದರಿಂದಾಗಿ ಜವಳಿ, ಚರ್ಮ, ಆಭರಣ ಹಾಗೂ ಕ್ರೀಡೆಗೆ ಸಂಬಂಧಿಸಿದ ಪರಿಕರಗಳು ಸೇರಿದಂತೆ ಭಾರತದ ಶೇ 95ರಷ್ಟು ವಸ್ತುಗಳಿಗೆ ಆ ದೇಶದಲ್ಲಿ ತೆರಿಗೆ ಮುಕ್ತ ಮಾರುಕಟ್ಟೆ ದೊರೆಯಲಿದೆ.

ವರ್ಚುವಲ್ ಆಗಿ ನಡೆದ ಸಮಾರಂಭದಲ್ಲಿ ವಾಣಿಜ್ಯ, ಕೈಗಾರಿಕಾ ಸಚಿವ ಪೀಯೂಷ್ ಗೋಯಲ್ ಹಾಗೂ ಆಸ್ಟ್ರೇಲಿಯಾದ ವ್ಯಾಪಾರ, ಪ್ರವಾಸೋದ್ಯಮ ಸಚಿವ ಡ್ಯಾನ್ ಟೆಹನ್ ಅವರು ಒಪ್ಪಂದಕ್ಕೆ ಸಹಿ ಹಾಕಿದರು. ಪ್ರಧಾನಿ ನರೇಂದ್ರ ಮೋದಿ, ಆಸ್ಟ್ರೇಲಿಯಾ ಪ್ರಧಾನಿ ಸ್ಕಾಟ್ ಮಾರಿಸನ್ ಇದ್ದರು.
ಭಾರತ ಮತ್ತು ಆಸ್ಟ್ರೇಲಿಯಾ ನಡುವಣ ಬಾಂಧವ್ಯದ ದೃಷ್ಟಿಯಿಂದ ಇದೊಂದು ಅದ್ಭುತ ಕ್ಷಣ ಎಂದು ಮೋದಿ ಬಣ್ಣಿಸಿದರು. ಈ ಒಪ್ಪಂದದೊಂದಿಗೆ ಉಭಯ ದೇಶಗಳ ಬಾಂಧವ್ಯ ಇನ್ನಷ್ಟು ಹತ್ತಿರವಾಗಲಿದೆ ಎಂದು ಮಾರಿಸನ್ ಹೇಳಿದರು.
ಈ ಒಪ್ಪಂದದಿಂದ ದ್ವಿಪಕ್ಷೀಯ ವಹಿವಾಟು ಮುಂದಿನ ಐದು ವರ್ಷಗಳಲ್ಲಿ ₹2700 ಕೋಟಿಯಿಂದ ₹4500 - ₹5,000 ಕೋಟಿವರೆಗೆ ಹೆಚ್ಚಳವಾಗುವ ನಿರೀಕ್ಷೆ ಇದೆ ಎಂದು ಗೋಯಲ್ ತಿಳಿಸಿದರು.