ಉಪ್ಪಳ: ಯಕ್ಷಮೌಕ್ತಿಕ ಮಹಿಳಾಕೂಟ ಮಂಗಲ್ಪಾಡಿ ಕಲಾತಂಡವು ತಂಡದ ಗುರುಗಳಾದ ಹರೀಶ್ ಬಳಂತಿಮೊಗರು ಇವರ ಸ್ವರ್ಣ ಸಂಭ್ರಮಾಚರಣೆ , ಹಿರಿಯ ಸಾಧಕರಿಗೆ ಸಂಮಾನ, ಮತ್ತು ತಾಳಮದ್ಧಳೆ ಸಪ್ತಾಹ ಮಂಗಲ್ಪಾಡಿ ಏಕಾಹ ಭಜನಾ ಮಂದಿರದ ಬಳಿ ಇರುವ ಸಾಕ್ಷಾತ್ಕಾರ ಮನೆಯ ಆವರಣದಲ್ಲಿ ಮಾರ್ಚ್ 27ರಿಂದ ಒಂದು ವಾರಗಳ ಕಾಲ ಜರಗಿ ಸಂಪನ್ನ ಗೊಂಡಿತು.
ಕಾಸರಗೋಡು ಹಾಗೂ ದಕ್ಷಿಣ ಕನ್ನಡ ಜಿಲ್ಲೆಗಳ ಆಯ್ದ ಏಳು ತಂಡಗಳು ಸಪ್ತಾಹದಲ್ಲಿ ಭಾಗವಹಿಸಿದ್ದವು. ಹಾಗೂ ಯಕ್ಷಮೌಕ್ತಿಕ ತಂಡದ ಗುರುಗಳಾದ ಹರೀಶ ಬಳಂತಿಮೊಗರು ಅವರಿಗೆ ಗಣ್ಯರ ಸಮಕ್ಷಮ ಗುರುವಂದನೆ ನಡೆಸಲಾಯಿತು.
ಎಡನೀರು ಮಠದ ಶ್ರೀ ಸಚ್ಚಿದಾನಂದ ಭಾರತೀ ಶ್ರೀಪಾದಂಗಳವರು ಸಮಾರೋಪ ಸಮಾರಂಭದಲ್ಲಿ ಆಶೀರ್ವಚನ ನೀಡಿ ಶುಭ ಹಾರೈಸಿದರು. ಕಾಸರಗೋಡಿನ ಖ್ಯಾತ ವೈದ್ಯ ಡಾ. ಬಿ ಎಸ್.ರಾವ್ ಅಧ್ಯಕ್ಷತೆ ವಹಿಸಿದ್ದು, ಬ್ರಹ್ಮಶ್ರೀ ಉಳಿಯತ್ತಾಯ ವಿಷ್ಣು ಅಸ್ರ, ಹಾಗೂ ಕರ್ನಾಟಕ ಯಕ್ಷಗಾನ ಅಕಾಡೆಮಿ ಅಧ್ಯಕ್ಷ ಡಾ.ಜಿ ಎಲ್ ಹೆಗಡೆ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.
ಡಾ.ಎಂ.ಪ್ರಭಾಕರ ಜೋಶಿ, ಹಾಗೂ ಹರೀಶ ಬಳಂತಿಮೊಗರು ಅವರ ಶಿಷ್ಯವೃಂದ ಶುಭ ಹಾರೈಸಿದರು. ಜಯಲಕ್ಷ್ಮಿ ಮಯ್ಯ ತಿಂಬರ ಸ್ವಾಗತಿಸಿ ಜಯಲಕ್ಷ್ಮಿ ಕಾರಂತ ಮಂಗಲ್ಪಾಡಿ ನಿರ್ವಹಿಸಿದ ಸಮಾರಂಭದಲ್ಲಿ ಹರೀಶ ಬಳಂತಿಮೊಗರು ವಂದಿಸಿದರು. ಬಳಿಕ ಯಕ್ಷಮೌಕ್ತಿಕ ಮಹಿಳಾಕೂಟ ಮಂಗಲ್ಪಾಡಿ ತಂಡದವರಿಂದ ಶಾಪಾನುಗ್ರಹ ಯಕ್ಷಗಾನ ತಾಳಮದ್ದಳೆ ಜರಗಿತು.