ಚೆನ್ನೈ: ಇಂಗ್ಲಿಷ್ಗೆ ಪರ್ಯಾಯವಾಗಿ ಹಿಂದಿ ಬಳಸಬೇಕು ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿಕೆಗೆ ಹಿಂದಿಯೇತರ ಪ್ರದೇಶಗಳಿಂದ ನಿರಂತರವಾಗಿ ಆಕ್ಷೇಪ ವ್ಯಕ್ತವಾಗುತ್ತಲೇ ಇದೆ. ಆಸ್ಕರ್ ವಿಜೇತ ಸಂಗೀತ ನಿರ್ದೇಶಕ ಎ.ಆರ್. ರೆಹಮಾನ್ ಅವರು ಟ್ವಿಟರ್‌ನಲ್ಲಿ ಪ್ರಕಟಿಸಿದ ಪೋಸ್ಟರ್ ಒಂದು ಹಿಂದಿ ಹೇರಿಕೆ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಚರ್ಚೆಗೆ ಕಾರಣವಾಗಿದೆ.
ತಮಿಳುನಾಡಿನ ವಿರೋಧ ಪಕ್ಷ ಎಐಎಡಿಎಂಕೆ ಕೂಡ 'ಹಿಂದಿ ಹೇರಿಕೆ'ಯನ್ನು ಖಂಡಿಸಿದೆ. ಜನರು ತಮಗೆ ಇಷ್ಟ ಇದ್ದರೆ ಹಿಂದಿ ಕಲಿಯುತ್ತಾರೆ. ಆದರೆ ಯಾವುದೇ ಭಾಷೆಯ ಹೇರಿಕೆ ಸ್ವೀಕಾರಾರ್ಹವಲ್ಲ ಎಂದು ಹೇಳಿದೆ.
ದ್ರಾವಿಡ ಚಳವಳಿಯ ನೇತಾರ ಸಿ.ಎನ್. ಅಣ್ಣಾದೊರೆ ಅವರ ಹೇಳಿಕೆಯೊಂದನ್ನು ಎಐಎಡಿಎಂಕೆ ನಾಯಕ ಒ. ಪನ್ನೀರ್‌ಸೆಲ್ವಂ ಉಲ್ಲೇಖಿಸಿದ್ದಾರೆ. '#ಸ್ಟಾಪ್ ಹಿಂದಿ ಇಂಪೋಸಿಷನ್' ಎಂಬ ಹ್ಯಾಷ್‌ಟ್ಯಾಗ್‌ನಲ್ಲಿ ಅವರು ಟ್ವೀಟ್ ಮಾಡಿದ್ದಾರೆ. ಜನರು ಇಷ್ಟ ಇದ್ದರೆ ಹಿಂದಿ ಕಲಿಯಲಿ. ಆದರೆ, ಹಿಂದಿಯನ್ನು ಹೇರುವುದು ಎಂದೂ ಸ್ವೀಕಾರಾರ್ಹವಲ್ಲ ಎಂದು ಅವರು ಟ್ವೀಟ್‌ನಲ್ಲಿ ಹೇಳಿದ್ದಾರೆ.
ಟ್ವಿಟರ್ ಬಳಕೆದಾರರಲ್ಲಿ ಹಲವರು ರೆಹಮಾನ್ ಅವರ ಪೋಸ್ಟರ್ ಅನ್ನು ಅಮಿತ್ ಶಾ ಅವರಿಗೆ ಲಿಂಕ್ ಮಾಡಿದ್ದಾರೆ. ರೆಹಮಾನ್ ಅವರು ಪೋಸ್ಟ್ ಮಾಡಿರುವ ಪೋಸ್ಟರ್ ತಮಿಳುಮಾತೆಯನ್ನು ಸ್ತುತಿಸುವ ಹಾಡನ್ನು ಉಲ್ಲೇಖಿಸುತ್ತಿದೆ. ತಮಿಳಿನ ಖ್ಯಾತ ಕವಿ ಭಾರತೀದಾಸನ್ ಅವರು ತಮಿಳು ಭಾಷೆಯನ್ನು ಹೊಗಳಿ ಬರೆದ ಕವಿತೆಯ ಸಾಲೊಂದನ್ನು ಪೋಸ್ಟರ್‌ನಲ್ಲಿ ಬರೆಯಲಾಗಿದೆ. ಪೋಸ್ಟರ್‌ನ ಮಧ್ಯ ಭಾಗದಲ್ಲಿ ಬಿಳಿ ಸೀರೆ ಉಟ್ಟ ಮಹಿಳೆಯ ಚಿತ್ರವಿದೆ. ಇದು ತಮಿಳು ಮಾತೆ ಎನ್ನಲಾಗುತ್ತಿದೆ. ಪೋಸ್ಟರ್‌ನ ಕೆಂಪು ಹಿನ್ನೆಲೆಯು ಹಿಂದಿ ಹೇರಿಕೆ ವಿರುದ್ಧದ ಆಕ್ರೋಶ ಎಂದು ವ್ಯಾಖ್ಯಾನಿಸಲಾಗುತ್ತಿದೆ.
ಯುವಜನರಿಗೆ ಅನ್ಯಾಯ: ಕೆ.ಟಿ. ರಾಮರಾವ್
ಜಾಗತಿಕ ಆಕಾಂಕ್ಷೆಗಳನ್ನು ಹೊಂದಿರುವ ಈ ದೇಶದ ಯುವ ಜನರ ಮೇಲೆ ಹಿಂದಿ ಹೇರಿಕೆಯು ಅವರಿಗೆ ಮಾಡುವ ಬಹುದೊಡ್ಡ ಅನ್ಯಾಯ ಎಂದು ತೆಲಂಗಾಣ ರಾಷ್ಟ್ರ ಸಮಿತಿ ಕಾರ್ಯಾಧ್ಯಕ್ಷ ಮತ್ತು ತೆಲಂಗಾಣದ ಸಚಿವ ಕೆ.ಟಿ.ರಾಮರಾವ್ ಅವರು ಹೇಳಿದ್ದಾರೆ.
'ಆತ್ಮೀಯ ಅಮಿತ್ ಶಾ ಅವರೇ, ವೈವಿಧ್ಯದಲ್ಲಿ ಏಕತೆಯೇ ನಮ್ಮ ಬಲ. ಭಾರತವು ರಾಜ್ಯಗಳ ಒಕ್ಕೂಟ... ಏನನ್ನು ತಿನ್ನಬೇಕು, ಏನನ್ನು ಧರಿಸಬೇಕು, ಯಾರನ್ನು ಪ್ರಾರ್ಥಿಸಬೇಕು, ಯಾವ ಭಾಷೆ ಮಾತಾಡಬೇಕು ಎಂಬ ನಿರ್ಧಾರವನ್ನು ಜನರಿಗೆ ಏಕೆ ನಾವು ಬಿಡಬಾರದು' ಎಂದು ರಾಮರಾವ್ ಅವರು ಟ್ವೀಟ್ ಮಾಡಿದ್ದಾರೆ.
'ಭಾಷಾ ಅಂಧಾಭಿಮಾನ ಅಥವಾ ಯಜಮಾನಿಕೆಯು ತಿರುಗುಬಾಣವಾಗಲಿದೆ' ಎಂದೂ ಅವರು ಹೇಳಿದ್ದಾರೆ.
'ಸಂಘದ ಕಾರ್ಯಸೂಚಿ'
'ಭಾರತದ ಹಲವು ಭಾಷೆಗಳಿಗೆ ಸಂವಿಧಾನವೇ ಮಹತ್ವ ಕೊಟ್ಟಿದೆ. ಹಲವು ರಾಜ್ಯಗಳು ಭಾಷೆಯ ಆಧಾರದಲ್ಲಿ ರೂಪುಗೊಂಡಿವೆ. ಇದಕ್ಕಾಗಿ ಸುದೀರ್ಘ ಹೋರಾಟವೇ ನಡೆದಿತ್ತು. ನಮ್ಮ ದೇಶದ ವೈವಿಧ್ಯ ಮತ್ತು ಒಕ್ಕೂಟ ವ್ಯವಸ್ಥೆಗೆ ಮಾನ್ಯತೆ ಇರಬಾರದು ಎಂಬುದು ಸಂಘ ಪರಿವಾರದ ಕಾರ್ಯಸೂಚಿ. ಪ್ರಾದೇಶಿಕ ಭಾಷೆಗಳನ್ನು ದುರ್ಬಲಗೊಳಿಸುವ ಕಾರ್ಯಸೂಚಿಯ ಭಾಗ ಇದು' ಎಂದು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಹೇಳಿದ್ದಾರೆ.