ಕಾಸರಗೋಡು: ಮನುಷ್ಯ ಜೀವನದಲ್ಲಿ ಹೋರಾಟಗಳು ಸಹಜ. ಆದರೆ ಕಾಸರಗೋಡಿನ ಕನ್ನಡಿಗರ ಬದುಕೇ ಹೋರಾಟವಾಗಿದೆ. ಕೇರಳ ಸರ್ಕಾರ ತೋರುವ ಮಲತಾಯಿ ಧೋರಣೆಯಿಂದ ಕಾಸರಗೋಡಿನ ಭಾಷಾ ಅಲ್ಪಸಂಖ್ಯಾತರು ನಿತ್ಯ ಹೋರಾಟದ ಬದುಕು ನಡೆಸುವ ಅನಿವಾರ್ಯತೆ ಎದುರಾಗಿರುವುದಾಗಿ ಎಡನೀರು ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿ ತಿಳಿಸಿದ್ದಾರೆ. ಅವರು ಜಿಲ್ಲೆಯ ಭಾಷಾ ಅಲ್ಪಸಂಕ್ಯಾತರ ವಿವಿಧ ಬೇಡಿಕೆಗಳ ಈಡೇರಿಸುವಂತೆ ಆಗ್ರಹಿಸಿ ಕನ್ನಡ ಹೋರಾಟ ಸಮಿತಿ ವತಿಯಿಂದ ಶುಕ್ರವಾರ ಜಿಲ್ಲಾಧಿಕಾರಿ ಕಚೇರಿ ಎದುರು ನಡೆದ ಧರಣಿ ಸತ್ಯಾಗ್ರಹ ಉದ್ಘಾಟಿಸಿ ಆಶೀರ್ವಚನ ನೀಡಿದರು.
ಕನ್ನಡಿಗರ ಸಮಸ್ಯೆ ಬಗೆಹರಿಸಲು ಕೇರಳ ಸರ್ಕಾರಕ್ಕೆ ಅಸಾಧ್ಯವಾದಲ್ಲಿ ಗಡಿನಾಡು ಕಾಸರಗೋಡನ್ನು ಕರ್ನಾಟಕದೊಂದಿಗೆ ವಿಲೀನಗೊಳಿಸಲು ಕೇರಳ ಸರ್ಕಾರ ಮುಂದಾಗಬೇಕು. ಸಂವಿಧಾನಾತ್ಮಕ ಸವಲತ್ತು ಪಡೆದುಕೊಳ್ಳಲು ಹೋರಾಟದ ಹಾದಿ ಹಿಡಿಯಬೇಕಾಗಿ ಬಂದಿರುವುದು ವಿಪರ್ಯಾಸ. ಸರ್ಕಾರ ಇನ್ನಾದರೂ, ಕಣ್ಣು ತೆರೆದು ಭಾಷಾ ಅಲ್ಪಸಂಕ್ಯಾತರಾದ ಕನ್ನಡಿಗರ ನ್ಯಾಯಯುತ ಬೇಡಿಕೆಗಳನ್ನು ಈಡೇರಿಸಲು ಮುಂದಾಗಬೇಕು. ಕನ್ನಡಪರ ಹೋರಾಟಗಳಿಗೆ ಸಮಸ್ತ ಕನ್ನಡಿಗರು ಕೈಜೋಡಿಸಬೇಕು ಎಂದು ತಿಳಿಸಿದರು.
ಕರ್ನಾಟಕ ಸಮಿತಿ ಅಧ್ಯಕ್ಷ ಮುರಳೀಧರ ಬಳ್ಳಕ್ಕುರಾಯ ಅಧ್ಯಕ್ಷತೆ ವಹಿಸಿದ್ದರು.
ರಾಜಕೀಯೇತರ ಚರ್ಚೆ ಅಗತ್ಯ:
ಕಾಸರಗೋಡಿನ ಭಾಷಾ ಅಲ್ಪಸಂಖ್ಯಾತರ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳಲು ರಾಜಕೀಯೇತರ ಚರ್ಚೆ ನಡೆಯಬೇಕದ ಅಗತ್ಯವಿದೆ ಎಂದು ಮಂಜೇಶ್ವರ ಶಾಸಕ ಎ.ಕೆ.ಎಂ ಅಶ್ರಫ್ ತಿಳಿಸಿದ್ದಾರೆ. ಕನ್ನಡ ಹೋರಾಟ ಸಮಿತಿ ವತಿಯಿಂದ ನಡೆದ ಧರಣಿಯಲ್ಲಿ ಅವರು ಮಾತನಾಡಿದರು. ಕನ್ನಡ ಭಾಷೆಗಾಗಿ ಹೋರಾಟ ನಡೆಸಿ ಹುತಾತ್ಮರಾದ ಕಾಸರಗೋಡಿನ ಬಲಿದಾನಿಗಳ ಶ್ರಮ ಹುಸಿಯಾಗಬಾರದು.ಜಿಲ್ಲೆಯಲ್ಲಿ ವಿದ್ಯಾರ್ಥಿಗಳು, ಉದ್ಯೋಗಿಗಳು ಹಾಗೂ ಜನಸಾಮಾನ್ಯರು ಇಂದು ಭಾಷಾ ಸಮಸ್ಯೆ ಎದುರಿಸುತ್ತಿದ್ದಾರೆ. ಕನ್ನಡ ಮಾಧ್ಯಮ ಶಾಲೆಗಳಿಗೆ ಮಲಯಾಳಿ ಶಿಕ್ಷಕರ ನೇಮಕಾತಿ ಸಂಕಷ್ಟ ತಂದೊಡ್ಡಿದೆ. ಮುಖ್ಯಮಂತ್ರಿ ಅಧ್ಯಕ್ಷರಾಗಿರುವ ರಾಜ್ಯ ಭಾಷಾ ಅಲ್ಪಸಂಖ್ಯಾತ ಸಮಿತಿ ಹಲವು ವರ್ಷಗಳಿಂದ ಸಭೆ ಸೇರದಿರುವುದರಿಂದ ಭಾಷಾ ಅಲ್ಪಸಂಖ್ಯತರ ಸಮಸ್ಯೆಗಳೂ ಮುನ್ನೆಲೆಗೆ ಬರುತ್ತಿಲ್ಲ. ಕಾಸರಗೋಡಿನ ಭಾಷಾ ಅಲ್ಪಸಂಖ್ಯಾತರ ಸಮಸ್ಯೆಗಳ ಬಗ್ಗೆ ವಿಧಾನಸಭೆಯಲ್ಲಿ ಈಗಾಗಲೇ ಧ್ವನಿಯೆತ್ತಿದ್ದೇನೆ. ಮುಂದೆಯೂ ಈ ಬಗ್ಗೆ ಪ್ರಸ್ತಾಪಿಸುವುದಾಗಿ ತಿಳಿಸಿದರು.
ಕಸಾಪ ಕೇರಳ ಗಡಿನಾಡ ಘಟಕ ಅಧ್ಯಕ್ಷ ಎಸ್.ವಿ ಭಟ್, ಕೆ. ಶ್ರೀಕಾಂತ್, ಡಾ. ಗಣಪತಿ ಭಟ್, ಟಿ. ಶಂಕರನಾರಾಯಣ ಭಟ್, ಗೋಪಾಲ ಶೆಟ್ಟಿ ಅರಿಬೈಲು, ಪ್ರದೀಪ್ ಶೆಟ್ಟಿ, ಆಯಿಷಾ ಎ.ಎ ಪೆರ್ಲ, ಗಣೇಶ್ ಪ್ರಸಾದ್ ಪಾಣೂರು, ಎಂ.ಎಚ್ ಜನಾರ್ದನ, ವಕೀಲ ಸದಾನಂದ ರೈ, ನಾರಾಯಣ ಭಟ್ ಮೈರ್ಕಳ, ನವೀನ್ ಮಸ್ಟರ್ ಮಾನ್ಯ, ವೆಂಕಟ ಭಟ್ ಎಡನೀರು, ಲಕ್ಷ್ಮಣ ಪ್ರಭು ಕುಂಬಳೆ, ಗುರುಪ್ರಸಾದ್ ಕೋಟೆಕಣಿ, ಸುಂದರ ಬಾರಡ್, ಕನ್ನಡ ಮಾಧ್ಯಮ ಅಂಗನಮವಾಡಿ ಶಿಕ್ಷಕಿಯರ ಸಂಘದ ಅಧ್ಯಕ್ಷೆ ಶೋಭಾ, ಕನ್ನಡ ಮಾಧ್ಯಮ ಪತ್ರಕರ್ತರ ಸಂಘದ ಜಿಲ್ಲಾ ಕಾರ್ಯದರ್ಶಿ ಗಂಗಾಧರ ತೆಕ್ಕೆಮೂಲೆ, ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು.
ಎಂ.ವಿ.ಮಹಾಲಿಂಗೇಶ್ವರ ಭಟ್ ಸ್ವಾಗತಿಸಿ, ಹೋರಾಟ ಸಮಿತಿ ಕಾರ್ಯದರ್ಶಿ ಕೆ. ಭಾಸ್ಕರ ಪ್ರಾಸ್ತಾವಿಕ ಮಾತುಗಳನ್ನಾಡಿ ಕಾರ್ಯಕ್ರಮ ನಿರೂಪಿಸಿದರು. ಈ ಸಂದರ್ಭ ವಿವಿಧ ಬೇಡಿಕೆಗಳ ಮನವಿಯನ್ನು ಜಿಲ್ಲಾಧಿಕಾರಿ ಭಂಡಾರಿ ಸ್ವಾಗತ್ ರಣವೀರ್‍ಚಂದ್ ಅವರಿಗೆ ಹಸ್ತಾಂತರಿಸಲಾಯಿತು. ಈ ನಿಟ್ಟಿನಲ್ಲಿ ಶೀಘ್ರ ಭಾಷಾ ಅಲ್ಪಸಂಖ್ಯಾತರ ಸಭೆ ಕರೆದು ಪರಿಹಾರ ಕಲ್ಪಿಸುವ ಭರವಸೆ ನೀಡಿದರು.