ಕಾಸರಗೋಡು: ಕೇರಳ ರಾಜ್ಯ ಸಾಕ್ಷರತಾ ಮಿಷನ್ ರಾಜ್ಯದಾದ್ಯಂತ 'ಶ್ರೇಷ್ಠತಾ ಉತ್ಸವ' ಸಾಕ್ಷರತಾ ಪರೀಕ್ಷೆಗಳನ್ನು ನಡೆಸಿತು. ಕಾಸರಗೋಡು ಜಿಲ್ಲೆಯ ಪಳ್ಳಿಕ್ಕೆರೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಚೇಟುಕುಂದು ಕಡಪ್ಪುರಂ ಎಲ್.ಪಿ.ಶಾಲೆಯಲ್ಲಿ ಕಾಸರಗೋಡು ಜಿಲ್ಲಾ ಮಟ್ಟದ ಉದ್ಘಾಟನಾ ಸಮಾರಂಭ ನಡೆಯಿತು.
ಗ್ರಾಮ ಪಂಚಾಯಿತಿ ಅಧ್ಯಕ್ಷ ಎಂ ಕುಮಾರನ್ ಅವರು ಅತ್ಯಂತ ಹಿರಿಯ ಕಲಿಕಾಗಾರ್ತಿ ನಾರಾಯಣಿ ಅಮ್ಮ (75) ಅವರಿಗೆ ಪ್ರಶ್ನೆ ಪತ್ರಿಕೆಗಳನ್ನು ಹಸ್ತಾಂತರಿಸುವ ಮೂಲಕ ಸಮಾರಂಭ ಉದ್ಘಾಟಿಸಿದರು. ಗ್ರಾ.ಪಂ.ಉಪಾಧ್ಯಕ್ಷೆ ನಾಸ್ಮಿನ್ ವಹಾಬ್ ಅಧ್ಯಕ್ಷತೆ ವಹಿಸಿದ್ದರು. ಈ ಕೇಂದ್ರದಲ್ಲಿ 24 ಮಂದಿ ಸಾಕ್ಷರತಾ ಕಲಿಕೆದಾರರು ಪರೀಕ್ಷೆ ಬರೆದಿದ್ದಾರೆ. ಜಿಲ್ಲಾ ಸಂಯೋಜಕ ಪಿ.ಎನ್.ಬಾಬು, ಗ್ರಾಮ ಪಂಚಾಯಿತಿ ಆರೋಗ್ಯ ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷ ಕೆ.ಮಣಿಕಂಠನ್, ಗ್ರಾಪಂ ಸದಸ್ಯ ಪಿ.ಅಬ್ಬಾಸ್, ಪಿಟಿಎ .ಅಧ್ಯಕ್ಷ ಕೆ.ಪುಷ್ಕರನ್, ಉಪಾಧ್ಯಕ್ಷ ಸಿ.ಎಚ್.ಜೈನುದ್ದೀನ್, ಎಸ್.ಎಂ.ಎಸ್ ಅಧ್ಯಕ್ಷ ವಿ.ಕೆ.ನಾರಾಯಣನ್, ಸಾಕ್ಷರತಾ ಪ್ರೇರಕರು, ಶಿಕ್ಷಕಿಯರು ಉಪಸ್ಥಿತರಿದ್ದರು. ಈ ಸಂದರ್ಭ ಜಿಲ್ಲಾ ಸಾಕ್ಷರತಾ ಸಮಿತಿ ಅಧ್ಯಕ್ಷರೂ ಆಗಿರುವ ಜಿಪಂ ಅಧ್ಯಕ್ಷೆ ಬೇಬಿ ಬಾಲಕೃಷ್ಣನ್ ಪರೀಕ್ಷಾ ಕೇಂದ್ರಕ್ಕೆ ಭೇಟಿ ನೀಡಿದರು.
ಕಾಸರಗೋಡು ಬ್ಲಾಕ್ ಪಂಚಾಯಿತಿ ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷೆ ಸಕೀನಾ ಅಬ್ದುಲ್ಲಾ, ಕಾರಡ್ಕ ಗ್ರಾಪಂ ಸ್ಥಾಯಿ ಸಮಿತಿ ಅಧ್ಯಕ್ಷ ಎಂ.ರತ್ನಾಕರನ್, ಪುಲ್ಲೂರು-ಪೆರಿಯ ಗ್ರಾಪಂ.ಅಧ್ಯಕ್ಷ ಸಿ.ಕೆ.ಅರವಿಂದಾಕ್ಷನ್, ವೆಸ್ಟ್ ಎಳೇರಿ ಬ್ಲಾಕ್ ಪಂಚಾಯಿತಿ ಸದಸ್ಯ ಎ.ವಿ.ರಾಜೇಶ್, ಮುಳಿಯಾರ್ ಗ್ರಾ.ಪಂ.ಅಧ್ಯಕ್ಷೆ ಟಿ.ವಿ.ಮಿನಿ, ಕೋಡೋಂ-ಬೇಲೂರು ಗ್ರಾಪಂ ಅಧ್ಯಕ್ಷ ಪಿ.ಎಸ್. ಶ್ರೀಜಾ ಹಾಗೂ ಮೀಂಜ ಗ್ರಾಪಂ ಉಪಾಧ್ಯಕ್ಷ ಜಯರಾಮನ್ ಪಾಲ್ಗೊಂಡಿದ್ದರು.