ಮುಂಬೈ: ಕೇಂದ್ರ ಸರ್ಕಾರವು ಧ್ವನಿವರ್ಧಕಗಳ ಬಳಕೆಗೆ ಸಂಬಂಧಿಸಿದಂತೆ ರಾಷ್ಟ್ರೀಯ ನೀತಿಯನ್ನು ಹೊರತಂದು, ಅದನ್ನು ಮೊದಲು ಬಿಜೆಪಿ ಆಡಳಿತವಿರುವ ರಾಜ್ಯಗಳಲ್ಲಿ ಜಾರಿಗೆ ತರಬೇಕು ಎಂದು ಶಿವಸೇನೆ ಆಗ್ರಹಿಸಿದೆ.
ಈ ಕುರಿತಂತೆ ಶಿವಸೇನೆ ಮುಖಂಡ ಸಂಜಯ್ ರಾವುತ್ ಬುಧವಾರ ಮಾತನಾಡಿದ್ದು, ಧ್ವನಿವರ್ಧಕಗಳ ಬಳಕೆಗೆ ಸಂಬಂಧಿಸಿದಂತೆ ರಾಷ್ಟ್ರೀಯ ನೀತಿಯನ್ನು ರೂಪಿಸಿ ಅದನ್ನು ಮೊದಲು ಬಿಜೆಪಿ ಆಡಳಿತ ಇರುವ ರಾಜ್ಯಗಳೂ ಸೇರಿದಂತೆ ಬಿಹಾರ, ದೆಹಲಿ ಮತ್ತು ಗುಜರಾತ್ ರಾಜ್ಯಗಳಲ್ಲಿ ಜಾರಿಗೆ ತರುವಂತೆ ನನ್ನ ಪಕ್ಷದ ಪರವಾಗಿ ನಾನು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಮನವಿ ಮಾಡುತ್ತೇನೆ ಎಂದು ಹೇಳಿದ್ದಾರೆ.
ಈ ತಿಂಗಳ ಆರಂಭದಲ್ಲಿ ಎಂಎನ್‌ಎಸ್ ಮುಖ್ಯಸ್ಥ ರಾಜ್ ಠಾಕ್ರೆ ಮಹಾರಾಷ್ಟ್ರದ ಮಸೀದಿಗಳಲ್ಲಿ ಧ್ವನಿವರ್ಧಕಗಳನ್ನು ತೆಗೆದುಹಾಕಬೇಕೆಂದು ಒತ್ತಾಯಿಸಿದ ನಂತರ ಧ್ವನಿವರ್ಧಕಗಳ ಬಳಕೆ ವಿಚಾರ ವ್ಯಾಪಕ ಸುದ್ದಿಗೆ ಗ್ರಾಸವಾಗುತ್ತಿದ್ದು, ಇದರ ನಡುವೆಯೇ ಧ್ವನಿವರ್ಧಕ ಬಳಕೆಯ ರಾಷ್ಟ್ರೀಯ ನೀತಿ ವಿಚಾರ ಕೂಡ ಇದೀಗ ಸುದ್ದಿಗೆ ಗ್ರಾಸವಾಗಿದೆ.
ಸುದ್ದಿಗಾರರೊಂದಿಗೆ ಮಾತನಾಡಿದ ಸಂಜಯ್ ರಾವತ್, 'ನೆಲದ ಕಾನೂನಿಗೆ ಬದ್ಧವಾಗಿರುವುದರಿಂದ ಮಹಾರಾಷ್ಟ್ರವು ಅದನ್ನು ಸ್ವಯಂಚಾಲಿತವಾಗಿ ಅನುಸರಿಸುತ್ತದೆ. ನಿಮ್ಮ ಜನರು ಧ್ವನಿವರ್ಧಕಗಳ ಬಳಕೆಯ ಬಗ್ಗೆ ವಿವಾದವನ್ನು ಸೃಷ್ಟಿಸಿದ್ದಾರೆ, ಆದ್ದರಿಂದ ರಾಷ್ಟ್ರೀಯ ನೀತಿಯ ಅಗತ್ಯವಿದೆ. ಗುಜರಾತ್ ಮತ್ತು ಉತ್ತರ ಪ್ರದೇಶದಲ್ಲಿ ಇನ್ನೂ ಧ್ವನಿವರ್ಧಕಗಳನ್ನು ತೆಗೆದಿಲ್ಲ. ಮೊದಲು ಅದನ್ನು ಬಿಜೆಪಿ ಆಡಳಿತ ಇರುವ ರಾಜ್ಯಗಳಲ್ಲಿ ಜಾರಿಗೆ ತನ್ನಿ ಎಂದು ಪರೋಕ್ಷ ಸವಾಲೆಸೆದಿದ್ದಾರೆ.
ಕೇಂದ್ರ ಸರ್ಕಾರವು ಗೋಹತ್ಯೆಯನ್ನು ನಿಷೇಧಿಸುವ ನೀತಿಯನ್ನು ರೂಪಿಸಿದೆ. ಆದರೆ ಈ ರಾಜ್ಯಗಳ ಮುಖ್ಯಮಂತ್ರಿಗಳು ಗೋಹತ್ಯೆ ನಿಷೇಧವನ್ನು ವಿರೋಧಿಸಿದ್ದರಿಂದ ಈಶಾನ್ಯ ರಾಜ್ಯಗಳು ಮತ್ತು ಗೋವಾವನ್ನು ವಿನಾಯಿತಿ ನೀಡಿದೆ, "ಈ ನಿಟ್ಟಿನಲ್ಲಿ ರಾಷ್ಟ್ರೀಯ ನೀತಿ ಎಲ್ಲಿದೆ"..?. ಧ್ವನಿವರ್ಧಕಗಳ ಮೇಲೆ ರಾಷ್ಟ್ರೀಯ ನೀತಿಯನ್ನು ಜಾರಿಗೊಳಿಸಿ ಮತ್ತು ಧೈರ್ಯವಿದ್ದರೆ ಅದನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಿ ಎಂದು ರಾವುತ್ ಹೇಳಿದ್ದಾರೆ.