ಶ್ರೀನಗರ: ಕಾಶ್ಮೀರ ಕಣಿವೆಯಲ್ಲಿ ಸದ್ಯ ಶಾಂತಿ ನೆಲೆಸಿರುವುದರಿಂದ ಈ ವರ್ಷದ ಮಾರ್ಚ್ ತಿಂಗಳೊಂದರಲ್ಲೇ 1.80 ಲಕ್ಷ ಪ್ರವಾಸಿಗರು ಭೇಟಿ ನೀಡಿದ್ದು,ಇದು ದಶಕದಲ್ಲೇ ದಾಖಲೆಯಾಗಿದೆ.
ಮುಂಬರುವ ದಿನಗಳಲ್ಲಿ ದೇಶದ ಬಯಲು ಪ್ರದೇಶಗಳಲ್ಲಿ ತಾಪಮಾನ ಹೆಚ್ಚಳವಾಗುವುದರಿಂದ ಕಣಿವೆಗೆ ಭೇಟಿ ನೀಡುವವರ ಸಂಖ್ಯೆ ಮತ್ತಷ್ಟು ಹೆಚ್ಚಳವಾಗಲಿದೆ.
'1,79,970 ಮಂದಿ ಕಾಶ್ಮೀರಕ್ಕೆ ಭೇಟಿ ನೀಡಿದ್ದು, ಇದು ಕಳೆದ ಹತ್ತು ವರ್ಷಗಳಲ್ಲೇ ಅತ್ಯಧಿಕ ದಾಖಲೆಯಾಗಿದೆ. ಮತ್ತಷ್ಟು ಪ್ರವಾಸಿಗರ ಆಗಮನದ ನಿರೀಕ್ಷೆಯಲ್ಲಿದ್ದೇವೆ. ಇಲ್ಲಿನ ಪ್ರವಾಸೋದ್ಯಮದ ಪುನರುಜ್ಜೀವನದ ಶ್ರೇಯವು ಈ ವಲಯದ ಎಲ್ಲ ಪಾಲುದಾರರ ಸಾಮೂಹಿಕ ಪ್ರಯತ್ನಕ್ಕೆ ಸಂದ ಪ್ರತಿಫಲ' ಎಂದು ಕಾಶ್ಮೀರ ಪ್ರವಾಸೋದ್ಯಮ ಇಲಾಖೆ ನಿರ್ದೇಶಕ ಜಿ.ಎನ್.ಇಟೂ ಹೇಳಿದರು.
'ಕೋವಿಡ್-19ರ ಮೊದಲ ಅಲೆ ಕ್ಷೀಣಿಸಿದ ನಂತರ ಎಲ್ಲೆಡೆ ಇಲಾಖೆ ವತಿಯಿಂದ ಪ್ರಚಾರ ಅಭಿಯಾನವನ್ನು ನಡೆಸಿದ್ದೇವೆ. ಅಲ್ಲದೇ ದೇಶದಾದ್ಯಂತ ರೋಡ್ ಶೋ ನಡೆಸಿದ್ದೇವೆ. ಎರಡನೇ ಅಲೆ ಸಂದರ್ಭದಲ್ಲಿ ಪ್ರವಾಸಿಗರ ವಿಶ್ವಾಸ ವೃದ್ಧಿಗಾಗಿ ಕೋವಿಡ್ ಲಸಿಕೆಯನ್ನು ಹಾಕಲಾಯಿತು' ಎಂದು ಅವರು ಹೇಳಿದರು.
2021ರಲ್ಲಿ 6 ಲಕ್ಷಕ್ಕೂ ಅಧಿಕ ಪ್ರವಾಸಿಗರು ಕಾಶ್ಮೀರಕ್ಕೆ ಭೇಟಿ ನೀಡಿದ್ದರೂ ಕೋವಿಡ್ -19 ರ ಅನಿಶ್ಚಿತತೆಯಲ್ಲೇ ಹೆಚ್ಚಾಗಿ ಕಳೆದುಹೋಯಿತು. ಈ 6 ಲಕ್ಷ ಪ್ರವಾಸಿಗರಲ್ಲಿ ಶೇ 99ರಷ್ಟು ಮಂದಿ ದೇಶದ ಇತರೆ ಭಾಗಗಳ ಜನರಾಗಿದ್ದು, ಇವರಲ್ಲಿ ಉನ್ನತ ವರ್ಗದ ಜನರೇ ಹೆಚ್ಚಾಗಿ ಭೇಟಿ ನೀಡಿದ್ದಾರೆ.
2019 ರ ಆಗಸ್ಟ್ 5ರಂದು ಕೇಂದ್ರ ಸರ್ಕಾರವು ಜಮ್ಮು ಮತ್ತು ಕಾಶ್ಮೀರದ ವಿಶೇಷ ಸ್ಥಾನಮಾನ ಹಿಂತೆಗೆದುಕೊಂಡಾಗ ಉಂಟಾದ ಬೆಳವಣಿಗೆ ಹಾಗೂ 2020ರಲ್ಲಿ ಕೋವಿಡ್ ಲಾಕ್‌ಡೌನ್‌ನಿಂದ ಕೇಂದ್ರಾಡಳಿತ ಪ್ರದೇಶದ ಪ್ರವಾಸೋದ್ಯಮ ಕ್ಷೇತ್ರವು ತತ್ತರಿಸಿ ಹೋಗಿತ್ತು.