ನವದೆಹಲಿ:ಅತ್ಯಧಿಕ ಮಿಲಿಟರಿ ವೆಚ್ಚದಲ್ಲಿ ಭಾರತ ವಿಶ್ವದಲ್ಲೇ ಮೂರನೇ ಸ್ಥಾನಕ್ಕೇರಿದೆ. ರಷ್ಯಾ ಹಾಗೂ ಬ್ರಿಟನ್ ದೇಶಗಳನ್ನು ಹಿಂದಿಕ್ಕಿ ಭಾರತ ಮೂರನೇ ಸ್ಥಾನಕ್ಕೇರಿದರೂ, ಮೊದಲ ಎರಡು ಸ್ಥಾನಗಳಲ್ಲಿರುವ ಅಮೆರಿಕ ಹಾಗೂ ಚೀನಾಗೆ ಹೋಲಿಸಿದರೆ ಈ ಮೊತ್ತ ಕಡಿಮೆ.
ನವದೆಹಲಿ:ಅತ್ಯಧಿಕ ಮಿಲಿಟರಿ ವೆಚ್ಚದಲ್ಲಿ ಭಾರತ ವಿಶ್ವದಲ್ಲೇ ಮೂರನೇ ಸ್ಥಾನಕ್ಕೇರಿದೆ. ರಷ್ಯಾ ಹಾಗೂ ಬ್ರಿಟನ್ ದೇಶಗಳನ್ನು ಹಿಂದಿಕ್ಕಿ ಭಾರತ ಮೂರನೇ ಸ್ಥಾನಕ್ಕೇರಿದರೂ, ಮೊದಲ ಎರಡು ಸ್ಥಾನಗಳಲ್ಲಿರುವ ಅಮೆರಿಕ ಹಾಗೂ ಚೀನಾಗೆ ಹೋಲಿಸಿದರೆ ಈ ಮೊತ್ತ ಕಡಿಮೆ.
ಭಾರತ ಮಾಡುವ ಮಿಲಿಟರಿ ವೆಚ್ಚದ ನಾಲ್ಕು ಪಟ್ಟು ಹೆಚ್ಚು ಚೀನಾ ವೆಚ್ಚ ಮಾಡುತ್ತಿದ್ದು, ಅಮೆರಿಕದ ಮಿಲಿಟರಿ ವೆಚ್ಚ ಭಾರತ ಮಾಡುವ ವೆಚ್ಚದ ಹತ್ತು ಪಟ್ಟು ಅಧಿಕ.
2021ರಲ್ಲಿ ಒಟ್ಟು ಜಾಗತಿಕ ಸೇನಾ ವೆಚ್ಚ 2113 ಶತಕೋಟಿ ಡಾಲರ್ ಆಗಿದ್ದು, ಕೋವಿಡ್-19 ಕಾರಣದಿಂದ ಉಂಟಾದ ಆರ್ಥಿಕ ಆಘಾತದ ನಡುವೆಯೂ ಮೊಟ್ಟಮೊದಲ ಬಾರಿಗೆ 2000 ಶತಕೋಟಿ ಮೊತ್ತವನ್ನು ದಾಟಿದೆ ಎಂದು ಸ್ಟಾಕ್ ಹೋಮ್ ಇಂಟರ್ ನ್ಯಾಷನಲ್ ಪೀಸ್ ರೀಸರ್ಚ್ ಇನ್‍ಸ್ಟಿಟ್ಯೂಟ್ (ಎಸ್ ಐ ಪಿ ಆರ್ ಐ) ಪ್ರಕಟಿಸಿದ ಅಂಕಿ ಅಂಶಗಳಿಂದ ತಿಳಿದು ಬಂದಿದೆ.
ಅತ್ಯಧಿಕ ವೆಚ್ಚ ಮಾಡುವ ಐದು ಅಗ್ರ ರಾಷ್ಟ್ರಗಳು ಒಟ್ಟು ಜಾಗತಿಕ ವೆಚ್ಚದ ಶೇಕಡ 62ರಷ್ಟು ಪಾಲು ಹೊಂದಿವೆ. ಅಮೆರಿಕ ಜಾಗತಿಕ ಮಿಲಿಟರಿ ವೆಚ್ಚದ ಶೇಕಡ 38ರಷ್ಟು ಅಂದರೆ 801 ಶತಕೋಟಿ ಡಾಲರ್ ವೆಚ್ಚ ಮಾಡುತ್ತದೆ. ಚೀನಾ 293 ಶತಕೋಟಿ ಡಾಲರ್, ಭಾರತ 77 ಶತಕೋಟಿ ಡಾಲರ್, ಬ್ರಿಟನ್ 68 ಶತಕೋಟಿ ಡಾಲರ್ ಹಾಗೂ ರಷ್ಯಾ 66 ಶತಕೋಟಿ ಡಾಲರ್ ವೆಚ್ಚ ಮಾಡುತ್ತಿವೆ. ಭಾರತದ ನೆರೆ ರಾಷ್ಟ್ರವಾದ ಪಾಕಿಸ್ತಾನ 11 ಶತಕೋಟಿ ಡಾಲರ್ ವೆಚ್ಚದೊಂದಿಗೆ 23ನೇ ಸ್ಥಾನದಲ್ಲಿದೆ.
ಚೀನಾದ ವಾಸ್ತವ ಸೇನಾ ವೆಚ್ಚ ರಹಸ್ಯವಾಗಿದ್ದರೂ, ಸತತ 27 ವರ್ಷಗಳಿಂದ ಮಿಲಿಟರಿ ವೆಚ್ಚ ಹೆಚ್ಚುತ್ತಲೇ ಇರುವ ಹಿನ್ನೆಲೆಯಲ್ಲಿ ಎಸ್‍ಐಪಿಆರ್‍ಐ ಈ ಮೊತ್ತವನ್ನು ಅಂದಾಜಿಸಿದೆ.
ಭಾರತದ ಮಿಲಿಟರಿ ವೆಚ್ಚ 2020ಕ್ಕೆ ಹೋಲಿಸಿದರೆ ಶೇಕಡ 0.9ರಷ್ಟು ಹೆಚ್ಚಳವಾಗಿದ್ದು, ಇದು 2012ರಲ್ಲಿ ಮಾಡುತ್ತಿದ್ದ ವೆಚ್ಚಕ್ಕಿಂತ ಶೇಕಡ 33ರಷ್ಟು ಅಧಿಕ. ನೆರೆರಾಷ್ಟ್ರಗಳಾದ ಚೀನಾ ಹಾಗೂ ಪಾಕಿಸ್ತಾನದ ಜತೆ ಗಡಿ ಸಂಘರ್ಷ ಹೊಂದಿ, ಆಗಾಗ್ಗೆ ಸಶಸ್ತ್ರ ಕಾದಾಟಗಳು ಸಂಭವಿಸುತ್ತಿದ್ದು, ಈ ಹಿನ್ನೆಲೆಯಲ್ಲಿ ತನ್ನ ಸಶಸ್ತ್ರ ಪಡೆಗಳ ಆಧುನೀಕರಣ ಮತ್ತು ಶಸ್ತ್ರಾಸ್ತ್ರ ಉತ್ಪಾದನೆಯಲ್ಲಿ ಸ್ವಾವಲಂಬನೆ ಸಾಧಿಸಲು ಭಾರತ ಆದ್ಯತೆ ನೀಡಿದೆ" ಎಂದು ಎಸ್‍ಐಪಿಆರ್‍ಐ ಹೇಳಿದೆ.