ನವದೆಹಲಿ: ಒಂದು ನಿರ್ದಿಷ್ಟ ಸಮುದಾಯದ ಮಹಿಳೆಯರಿಗೆ ಅತ್ಯಾಚಾರ ಬೆದರಿಕೆ ಹಾಕಿರುವ ಉತ್ತರ ಪ್ರದೇಶದ ಸ್ವಾಮಿ ಭಜರಂಗ್ ದಾಸ್ ಮುನಿಯನ್ನು ಬಂಧಿಸುವಂತೆ ರಾಷ್ಟ್ರೀಯ ಮಹಿಳಾ ಆಯೋಗ(ಎನ್‌ಸಿಡಬ್ಲ್ಯೂ) ಶುಕ್ರವಾರ ಪೊಲೀಸರಿಗೆ ಸೂಚಿಸಿದೆ ಮತ್ತು ಮೂಕ ಪ್ರೇಕ್ಷಕರಾಗದೇ ಇಂತಹ ಘಟನೆಗಳನ್ನು ತಡೆಯಲು ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳಿ ಎಂದು ಪೊಲೀಸರಿಗೆ ಛೀಮಾರಿ ಹಾಕಿದೆ.
ಕೇಸರಿ ವಸ್ತ್ರಧಾರಿ ಸ್ವಾಮಿ ಭಜರಂಗ್ ದಾಸ್ ಮುನಿ ಅವರು ಪ್ರಚೋದನಕಾರಿ ಭಾಷಣ ಮಾಡುತ್ತಿರುವ ಮತ್ತು "ಅತ್ಯಾಚಾರ ಬೆದರಿಕೆ" ಹಾಕುತ್ತಿರುವ ವೀಡಿಯೊ ಗುರುವಾರ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದು, ಪೊಲೀಸರು ತನಿಖೆ ಆರಂಭಿಸಿದ್ದಾರೆ.
ಉತ್ತರ ಪ್ರದೇಶದ ಸೀತಾಪುರ ಖೈರಾಬಾದ್ ಪಟ್ಟಣದಲ್ಲಿರುವ ಮಹರ್ಷಿ ಶ್ರೀ ಲಕ್ಷ್ಮಣ ದಾಸ್ ಉದಾಸಿನ್ ಆಶ್ರಮದ ಮಹಾಂತ್ ಭಜರಂಗ್ ದಾಸ್ ಮುನಿ ಅವರು, ಯಾವುದೇ ಹಿಂದೂ ಮಹಿಳೆಯನ್ನು ಇತರೆ ಯಾವುದೇ ಸಮುದಾಯದ ವ್ಯಕ್ತಿ ಚುಡಾಯಿಸಿದರೆ, ಆ ಸಮುದಾಯದ ಮಹಿಳೆಯ ಮೇಲೆ ಅತ್ಯಾಚಾರ ಎಸಗುವುದಾಗಿ ಹೇಳಿರುವುದು ವಿಡಿಯೋದಲ್ಲಿ ಸೆರೆಯಾಗಿದೆ.
ಈ ಹೇಳಿಕೆಯನ್ನು ಗಂಭೀರವಾಗಿ ಪರಿಗಣಿಸಿದ ಎನ್‌ಸಿಡಬ್ಲ್ಯೂ ಅಧ್ಯಕ್ಷೆ ರೇಖಾ ಶರ್ಮಾ ಅವರು, ಈ ಸಂಬಂಧ ಉತ್ತರ ಪ್ರದೇಶದ ಪೊಲೀಸ್ ಮಹಾನಿರ್ದೇಶಕರಿಗೆ ಪತ್ರ ಬರೆದಿದ್ದು, ಈ ವಿಚಾರದಲ್ಲಿ ತಕ್ಷಣವೇ ಮಧ್ಯಪ್ರವೇಶಿಸಿ ಬಜರಂಗದಾಸ್ ವಿರುದ್ಧ ಎಫ್‌ಐಆರ್ ದಾಖಲಿಸಬೇಕು ಮತ್ತು ಆರೋಪಿಯನ್ನು ಬಂಧಿಸಬೇಕು ಎಂದು ಒತ್ತಾಯಿಸಿದ್ದಾರೆ.