ಉಪ್ಪಳ: ಎಲ್ಲರೂ ಪ್ರತಿನಿತ್ಯ ತಮ್ಮೂರಿನ ದೇಗುಲಗಳಿಗೆ ತೆರಳುವ ಪರಿಪಾಠವನ್ನು ಬೆಳೆಸಿಕೊಳ್ಳಬೇಕು. ಬದಲಾಗುತ್ತಿರುವ ಕಾಲಘಟ್ಟದಲ್ಲಿ ಧಾರ್ಮಿಕ ಶ್ರದ್ಧೆ, ದೇವರ ಮೇಲಿನ ಭಕ್ತಿಯು ಮಾನಸಿಕ ನೆಮ್ಮದಿ ಮತ್ತು ಕ್ಲೇಶರಹಿತ ಜೀವನಕ್ಕೆ ಕಾರಣವಾಗಿದೆ. ಇಷ್ಟ ದೇವರ ಸ್ಮರಣೆಯ ಮೂಲಕ ದುರಿತಗಳು ನಿವಾರಣೆಯಾಗುತ್ತವೆ ಎಂದು ಎಡನೀರು ಶ್ರೀ ಸಚ್ಚಿದಾನಂದ ಭಾರತಿ ಶ್ರೀಪಾದರು ನುಡಿದರು.
ಬಾಯಾರು ಸನಿಹ್ ವಾಟೆತ್ತಿಲ ಶ್ರೀ ಸುಬ್ರಹ್ಮಣ್ಯೇಶ್ವರ ದೇಗುಲದಲ್ಲಿ ಸಂಪನ್ನಗೊಂಡ ಪುನರ್ ನವೀಕರಣ ಮತ್ತು ಬ್ರಹ್ಮಕಲಶದ ಕೊನೆಯ ದಿನವಾದ ಬುಧವಾರದಂದು ನಡೆದ ಧಾರ್ಮಿಕ ಸಭೆಯಲ್ಲಿ ಆಶೀರ್ವಚನ ನೀಡಿದರು.
ಧಾರ್ಮಿಕ ಕೇಂದ್ರಗಳು ಸಮಾಜದ ಅಭ್ಯುದಯಕ್ಕೆ ನಿರಂತರ ಕೊಡುಗೆ ನೀಡುತ್ತಿವೆ. ಧರ್ಮ ಶ್ರದ್ಧೆ ಬೆಳೆಸಿ, ಭಕ್ತಿಯ ಸುಧೆಯನ್ನು ಪಸರುವ ಕಾರ್ಯವೂ ವಾಟೆತ್ತಿಲ ದೇಗುಲದಿಂದಾಗುತ್ತಿದೆ. ಬಹಳ ಸುಂದರವಾಗಿ ಪುನರ್ ನಿರ್ಮಾಣಗೊಂಡ ದೇಗುಲವು ಗ್ರಾಮದ ಅಭ್ಯುದಯಕ್ಕೆ ನಾಂದಿ ಹಾಡಲಿ ಎಂದು ಹರಸಿದರು. ದಕ್ಷಿಣಾಮೂರ್ತಿ ಶ್ರೀ ಗೋಪಾಲಕೃಷ್ಣನ ಆಶೀರ್ವಾದ ಸದಾ ಇರಲಿ ಹರಸಿದರು.
ಈ ಸಂದರ್ಭ ಹಿರಿಯ ಸಾಹಿತಿ ಶ್ರೀಪಡ್ರೆ ವಿರಚಿತ ಶ್ರೀ ವಾಟೆತ್ತಿಲ ಸುಪ್ರಭಾತದ ಮುದ್ರಣ ಪ್ರತಿಯನ್ನು ಸ್ವಾಮೀಜಿ ಲೋಕಾರ್ಪಣೆಗೊಳಿಸಿದರು. ಸಂಧ್ಯಾಗೀತಾ ಬಾಯಾರು ಸುಪ್ರಭಾತವನ್ನು ಹಾಡಿದರು. ಕಾರ್ಯಕ್ರಮದ ಅತಿಥಿಯಾಗಿ ಭಾಗವಹಿಸಿದ ವೇದಮೂರ್ತಿ ಡಾI ಸತ್ಯಕೃಷ್ಣ ಭಟ್ ಮಾತನಾಡಿ ಪ್ರತಿ ಶಬ್ದಕ್ಕೂ ಸಂಸ್ಕøತದಲ್ಲಿ ಅರ್ಥ ವ್ಯಾಖ್ಯಾನವಿದೆ. ಮಾತೆ, ಜನಕ ಮತ್ತು ಗುರುವಿನಿಂದ ಪ್ರಭಾವಿಸಲ್ಪಟ್ಟು ಯಾರು ಸರಿಯಾದ ಜೀವನಕ್ರಮವನ್ನು ರೂಢಿಸಿಕೊಂಡು ಮುನ್ನಡೆಯುತ್ತಾರೋ ಅವರನ್ನು ಮಾನವ ಎಂದು ಕರೆಯಲಾಗುತ್ತದೆ. ಇಂತಹ ಮಾನವನ ಪರಮ ಧ್ಯೇಯ ಜ್ಞಾನದ ಅರಹುವಿಕೆಯಾಗಿದೆ. ಇಂತಹ ಪರಮಜ್ಞಾನವನ್ನು ಪಡೆದುಕೊಳ್ಳಲು ಕರ್ಮಲೇಪದ ಬಿಡುಗಡೆಯೂ ಮುಖ್ಯವಾಗಿದೆ ಎಂದರು. ಶ್ರೀ ಸುಬ್ರಹ್ಮಣ್ಯನ ಪ್ರಾರ್ಥನೆಯಿಂದ ಎಲ್ಲರಿಗೂ ಒಳ್ಳೆಯ ಪ್ರಜ್ಞೆ ಪ್ರಾಪ್ತಿಯಾಗಲಿ ಎಂದು ಹಾರೈಸಿದರು.
ವೇದಗಳಲ್ಲೂ ಶ್ರೀ ಸುಬ್ರಹ್ಮಣ್ಯನ ಉಲ್ಲೇಖವಿದೆ. ವೇದಗಳು ಮೂಲದಲ್ಲಿ ಸ್ತುತಿಸಿರುವುದು ಪ್ರಕೃತಿಶಕ್ತಿಯನ್ನೇ , ವೇದಗಳಲ್ಲಿ ಉಲ್ಲೇಖಿತವಾದ ಸುಬ್ರಹ್ಮಣ್ಯ ಪರಮ ಜ್ಞಾನದ ಪ್ರತೀಕ ಎಂದರು. ಸಭಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಕರ್ನಾಟಕ ಲೋಕಸೇವಾ ಆಯೋಗದ ಮಾಜಿ ಅಧ್ಯಕ್ಷ ಟಿ.ಶ್ಯಾಮ ಭಟ್- ಹಿಂದೂಧರ್ಮ ಪರಂಪರೆಯ ಅತಿಮುಖ್ಯ ಶ್ರದ್ಧಾಕೇಂದ್ರಗಳಾದ ದೇಗುಲಗಳ ಪುನರ್ ನಿರ್ಮಾಣ ಎಲ್ಲಡೆಯೂ ನಡೆಯುತ್ತಿವೆ. ಧರ್ಮ ಜಾಗೃತಿಯೊಂದಿಗೆ, ಎಲ್ಲರ ಮೇಲೂ ದೇವರ ಕೃಪೆಯಿರಬೇಕು. ಶ್ರೀರಾಮ ಹುಟ್ಟಿ ಬೆಳೆದ ಅಯೋಧ್ಯೆಯಲ್ಲೂ ಶ್ರೀರಾಮ ಮಂದಿರ ನಿರ್ಮಾಣವಾಗುತ್ತಿರುವುದು ಸಂತಸ ಮತ್ತು ಸಂಭ್ರಮದ ವಿಚಾರವಾಗಿದೆ. ಇತ್ತೀಚೆಗಷ್ಟೇ ಎಡನೀರು ಶ್ರೀಗಳು ವಾರಣಾಸಿಗೆ ತೆರಳಿದ್ದರು, ಅಲ್ಲಿನ ಹಲವು ಮಹಾನ್ ವ್ಯಕ್ತಿಗಳೊಂದಿಗೆ ಸಮಾಜದಲ್ಲಿ ಧರ್ಮ ಜಾಗೃತಿ ಮಾಡುವ ಬಗ್ಗೆ ಚರ್ಚಿಸಿದ್ದಾರೆ ಎಂದರು. ಸ್ವಾಮಿಗಳ ಸತ್ಪ್ರಭೆಯು ಸಮಾಜದ ಮೇಲೆ ನಿರಂತರ ಇರಲಿ ಎಂದರು. ಸುರಸೇನಾಧಿಪತಿ ಶ್ರೀ ಸುಬ್ರಹ್ಮಣ್ಯನು ಎಲ್ಲರನ್ನು ಹರಸಲಿ ಎಂದು ಆಶಿಸಿದರು.
ಕಾರ್ಯಕ್ರಮದ ಆರಂಭದಲ್ಲಿ ವಾಟೆತ್ತಿಲ ಜಾಲು ಸುಬ್ರಹ್ಮಣ್ಯ ಭಟ್ ಸುಧಾ ದಂಪತಿ ಎಡನೀರು ಶ್ರೀಗಳಿಗೆ ತುಳಸಿ ಹಾರಾರ್ಪಣೆ ಮಾಡಿ, ಫಲಪುಷ್ಪ ನೀಡಿ ಸ್ವಾಗತಿಸಿದರು. ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಮೋನಪ್ಪ ಶೆಟ್ಟಿ ಕಟ್ನಬೆಟ್ಟು, ಅನನ್ಯ ಫೀಡ್ಸ್ ಮಂಗಳೂರು ಇದರ ದಿವಾಣ ಗೋವಿಂದ ಭಟ್ ಶುಭಾಶಂಸನೆಗೈದರು. ಹಿರಿಯ ವೈದಿಕ ಮಾರ್ಗದರ್ಶಕರಾದ ಕಲ್ಲಡ್ಕ ರಾಮಕೃಷ್ಣ ಭಟ್ಟರಿಗೆ ಸ್ವಾಮೀಜಿ ಶಾಲು ಹೊದಿಸಿ, ಸ್ಮರಣಿಕೆ ನೀಡಿ ಆಶೀರ್ವದಿಸಿ ಗೌರವಿಸಿದರು. ವೇದಿಕೆಯಲ್ಲಿ ಹಿರಿಯರಾದ ವೆಂಕಟಸುಬ್ಬರಾವ್, ಕೊಮ್ಮುಂಜೆ, ಶ್ರೀಧರ ಭಟ್ ಸಜಂಕಿಲ, ವಾಟೆತ್ತಿಲ ಶ್ರೀ ಸುಬ್ರಹ್ಮಣ್ಯ ಕ್ಷೇತ್ರದ ಆಡಳಿತ ಮೊಕ್ತೇಸರ ಮಾಧವ ಭಟ್ ವಿ ಇದ್ದರು. ಕ್ಷೇತ್ರ ಜೀರ್ಣೋದ್ಧಾರ ಸಮಿತಿ ಕಾರ್ಯದರ್ಶಿ ಶ್ರೀಕಾಂತ ವಿ.ಸ್ವಾಗತಿಸಿದರು. ಕಾರ್ಯಕ್ರಮದ ಆರಂಭದಲ್ಲಿ ವರುಣ್. ಭಟ್.ಕೆ.ಎಂ ಮತ್ತು ಆವಳಮಠ ಸೂರ್ಯನಾರಾಯಣ ಭಟ್ ವೈದಿಕ ಪ್ರಾರ್ಥನೆ ಮಾಡಿದರು. ಶ್ರೀರಾಮ ಭಟ್ ಕೆದುಕೋಡಿ ಧನ್ಯವಾದ ಸಲ್ಲಿಸಿದರು. ಉಮಾದೇವಿ ಕಾರ್ಯಕ್ರಮ ನಿರೂಪಿಸಿದರು.
ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಯಕ್ಷಾಭಿಮಾನಿ ಬಳಗ ಬಾಯಾರು ಪ್ರಾಯೋಜಿಸಿದ, ಶ್ರೀ ಕೋದಂಡರಾಮ ಕೃಪಾಪೆÇೀಷಿತ ಯಕ್ಷಗಾನ ಮಂಡಳಿ ಹನುಮಗಿರಿ ಇವರಿಂದ ಕುಮಾರ ವಿಜಯ ಯಕ್ಷಗಾನ ಬಯಲಾಟ ನಡೆಯಿತು. ಬೆಳಗ್ಗೆ 7 ರಿಂದ 10 ಗಂಟೆ ತನಕ ವಿವಿಧ ಭಜನ ತಂಡಗಳಿಂದ ಭಜನ ಕಾರ್ಯಕ್ರಮ ನಡೆಯಿತು.