ಕಾಸರಗೋಡು: ಪಿಲಿಕೋಡು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಜಲಮೂಲಗಳನ್ನು ಮಣ್ಣು ಸವಕಳಿಯಿಂದ ಸಂರಕ್ಷಿಸುವ ನಿಟ್ಟಿನಲ್ಲಿ ಹೊಳೆ ಅಂಚಿಗೆ ಹುರಿಹಗ್ಗದಿಂದ ತಯಾರಿಸಿದ ಹೊದಿಕೆ ಹಾಸುವ ಯೋಜನೆಗೆ ಚಾಲನೆ ನೀಡಲಾಯಿತು. ಪಂಚಾಯಿತಿ ವ್ಯಾಪ್ತಿಯ ವಿವಿಧ ಹೊಳೆಗಳ ಆಳ ಮತ್ತು ಅಗಲವನ್ನು ಹೆಚ್ಚಿಸುವುದರ ಜತೆಗೆ ಎರಡೂ ಬದಿಗಳಲ್ಲಿ ಹುರಿಹಗ್ಗ ಹೊದಿಕೆ ಅಳವಡಿಸುವುದು ಯೋಜನೆ ಗುರಿಯಾಗಿದೆ. ಯೋಜನೆಯನ್ವಯ ವಿವಿಧ ಹೊಳೆಗಳಲ್ಲಿ ಅರ್ಧ ಅಣೆಕಟ್ಟುಗಳನ್ನು ನಿರ್ಮಿಸಿ ನೀರು ದಾಸ್ತಾನು ನಡೆಸಲಾಗುವುದು. ಪಾಲಿಕೋಡು ಪಂಚಾಯಿತಿಯಲ್ಲಿ ಸುಮಾರು 4500 ಮೀಟರ್ ಹೊಳೆಗಳಿದ್ದು, ನರೆಗಾ ಯೋಜನೆಯನ್ವಯ ನಾಲೆಗಳನ್ನು ಪುನಶ್ಚೇತನಗೊಳಿಸುವುದರ ಜತೆಗೆ ಹುರಿಹಗ್ಗದ ಹೊದಿಕೆಯನ್ನ್ನು ಅಳವಡಿಸಲಾಗುತ್ತಿದೆ.
ಪಿಲಿಕೋಡು ಪಂಚಾಯಿತಿಯ ಪಟ್ಟನ್ಮಾರ್ ತೊರೆಯಿಂದ ಆನಿಕ್ಕಾಡಿ-ಪುತಿಲೊಟ್ಟು-ವೆಳ್ಳಾಚಲ್-ಕಾಲಿಕ್ಕಡವುವರೆಗಿನ 2500 ಮೀಟರ್ ಕಾಲುವೆ ಹಾಗೂ ಅದರಲ್ಲಿ ಹರಿಯುವ ಮಣಿಯಾರ ತೋಡುಗಳಲ್ಲಿ ಹುರಿಹಗ್ಗ ಹೊದಿಕೆ ಅಳವಡಿಸುವ ಕಾಮಗಾರಿ ಆರಂಭಿಸಲಾಗಿದೆ. ಇದರೊಂದಿಗೆ ಪಂಚಾಯಿತಿ ವ್ಯಾಪ್ತಿಯ ಹೊಳೆಗಳು, ಕೆರೆಗಳನ್ನು ಕೂಡ ಮೇಲ್ದರ್ಜೆಗೇರಿಸಲಾಗುವುದು.
ನೀಲೇಶ್ವರ ಬ್ಲಾಕ್ ಪಂಚಾಯಿತಿ ಅಧ್ಯಕ್ಷ ಮಾಧವನ್ ಮಣಿಯಾರ ಯೋಜನೆ ಉದ್ಘಾಟಿಸಿದರು. ಪಿಲಿಕೋಡು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಪಿ.ಪಿ.ಪ್ರಸನ್ನಕುಮಾರಿ ಅಧ್ಯಕ್ಷತೆ ವಹಿಸಿದ್ದರು. ಹಸಿರು ಕೇರಳ ಮಿಷನ್ ಸಂಯೋಜಕ ಪಿ. ಸುಬ್ರಮಣಿಯನ್ ಮುಖ್ಯ ಅತಿಥಿಗಳಾಗಿದ್ದರು. ಉಪಾಧ್ಯಕ್ಷ ಎ.ಕೃಷ್ಣನ್, ಸ್ಥಾಯಿ ಸಮಿತಿ ಅಧ್ಯಕ್ಷರಾದ ಕೆ.ವಿ.ವಿಜಯನ್ ಮತ್ತು ವಿ.ವಿ. ಸುಲೋಚನಾ ಹಾಗೂ ವಾರ್ಡ್ ಸದಸ್ಯರಾದ ಕೆ.ಪ್ರದೀಪನ್, ನವೀನ್ ಬಾಬು, ಪಿ ಅಜಿತಾ, ಪಿ ಪ್ರಮೀಳಾ, ಎನ್ ಪ್ರಸೀತಾ, ಎಂವಿ ರಾಧಾಕೃಷ್ಣನ್, ಪಿ.ರೇಷ್ಮ, ಭತ್ತಸಂರಕ್ಷಣಾ ಸಮಿತಿ ಸದಸ್ಯರಾದ ಸಿ. ಕೃಷ್ಣನ್, ಎ. ಅಪ್ಪುಕುಟ್ಟನ್, ಕೆ. ಪ್ರಭಾಕರನ್, ರಾಘವನ್ ಎನ್‍ಆರ್‍ಇಜಿ ಸಹಾಯಕ ಎಂಜಿನಿಯರ್ ಅಶ್ವಿನಿ ಮತ್ತು ಎನ್‍ಆರ್‍ಇಜಿ ಸಿಬ್ಬಂದಿಗಳಾದ ಗಿರಿಜಾ, ಶ್ರೀನಿಧಿ ಮತ್ತು ಅನುಜಾ ಉಪಸ್ಥಿತರಿದ್ದರು.