ಕಾಸರಗೋಡು: ಇಂಧನ ಬೆಲ;ಎಯೇರಿಕೆ ಖಂಡಿಸಿ ಜಿಲ್ಲೆಯಲ್ಲಿ ಪ್ರತಿಭಟನೆ ಕಾವು ಹೆಚ್ಚಾಗತೊಡಗಿದೆ. ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ವಿರೋಧಿಸಿ ಡಿವೈಎಫ್‍ಐ ಕಾಸರಗೋಡು ಬ್ಲಾಕ್ ಸಮಿತಿ ನೇತೃತ್ವದಲ್ಲಿ ಕಾಸರಗೋಡು ಪ್ರಧಾನ ಅಂಚೆ ಕಛೇರಿ ಎದುರು ಪ್ರತಿಭಟನೆ ಮಂಗಳವಾರ ನಡೆಯಿತು.
ಧರಣಿಗೆ ಪೂರ್ವಭಾವಿಯಾಗಿ ನಗರದಲ್ಲಿ ಪ್ರತಿಭಟನ ಮೆರವಣಿಗೆ ನಡೆಯಿತು. ರಾಜ್ಯ ಸಮಿತಿ ಸದಸ್ಯ ಕೆ.ಸಬೀಶ್ ಧರಣಿ ಉದ್ಘಾಟಿಸಿ ಮಾತನಾಡಿ, ಇಂಧನ ಬೆಲೆಯೇರಿಕೆ ದೇಶದ ಜನಸಾಮಾನ್ಯರ ಜೀವನವನ್ನು ಮೂರಾಬಟ್ಟೆ ಮಾಡಿದೆ. ಅಡುಗೆ ಅನಿಲ ಬೆಲೆಯಲ್ಲಿ ಗಣನೀಯ ಏರಿಕೆಯಾಗಿರುವುದರಿಂದ ಬಡಜನರು ಮತ್ತಷ್ಟು ಸಂಕಷ್ಟ ಅನುಭವಿಸಬೇಕಾಗಿದೆ. ನಿತ್ಯೋಪಯೋಗಿ ಸಾಮಗ್ರಿ ಬೆಲೆಯೂ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ದೇಶದ ಜನತೆ ಆರ್ಥಿಕ ಸಂದಿಗ್ಧತೆಗೆ ಸಿಲುಕಿ ನರಳುವ ಸ್ಥಿತಿಯುಂಟಾಗಿದೆ ಎಂದು ತಿಳಿಸಿದರು. ಬ್ಲಾಕ್ ಸಮಿತಿ ಅಧ್ಯಕ್ಷ ಸುನಿಲ್ ಕಡಪ್ಪುರಂ ಅಧ್ಯಕ್ಷತೆ ವಹಿಸಿದ್ದರು. ಪ್ರವೀಣ್ ಪಾಡಿ, ಜ್ಯೋತಿ ಕೆ, ಮಿಥುನ್ ರಾಜ್ ಉಪಸ್ಥಿತರಿದ್ದರು. ಬ್ಲಾಕ್ ಕಾರ್ಯದರ್ಶಿ ಸುಭಾಷ್ ಪಾಡಿ ಸ್ವಾಗತಿಸಿದರು.