ಉಪ್ಪಳ: ಮನುಷ್ಯ ಜೀವನವು ಕ್ರಿಯಾಶಕ್ತಿ, ಬುದ್ಧಿಶಕ್ತಿ, ಭಾವಶಕ್ತಿ ಗಣಿಯಾಗಿದ್ದು ಅದರ ಶುದ್ಧಿಯ ಮೂಲಕ ಬದುಕು ಪಾವನವಾಗಬೇಕು. ಆ ಮೂಲಕ ಬ್ರಹ್ಮಸಾಕ್ಷಾತ್ಕಾರದತ್ತ ಜೀವನ ಪಯಣ ಸಾಗಬೇಕು. ಪ್ರತಿಯೋರ್ವನ ಹೃದಯಗಳಲ್ಲೂ ದೇವರಿದ್ದಾನೆ, ಆತನ ಇರುವಿಕೆಯನ್ನು ಗುರುತಿಸಿ ಆತ್ಮ ಸಾಕ್ಷಾತ್ಕಾರದತ್ತ ಜೀವನದ ಗುರಿಯನ್ನು ಇರಿಸಬೇಕಿದೆ. ಹೃದಯದಲ್ಲಿ ಭಗವಂತನ ಇರುವಿಕೆಯ ಅರಿವು ಬಂದಾಗ ಅಹಂ ತೊಲಗಿ ಅಖಂಡ, ಅವ್ಯಕ್ತ, ನಿರಾಕಾರ ದೇವನ ದರ್ಶನವಾಗುತ್ತದೆ ಮಾತ್ರವಲ್ಲ ಸತ್ ಚಿತ್ ಅನಂದದ ಅನುಭೂತಿ ಆಗುತ್ತದೆ ಎಂದು ಪ್ರಖರ ವಾಗ್ಮಿ ಡಾ. ಪ್ರದೀಪ ಆಟಿಕುಕ್ಕೆ ನುಡಿದರು.
ವಾಟೆತ್ತಿಲ ಶ್ರೀ ಸುಬ್ರಹ್ಮಣ್ಯೇಶ್ವರ ದೇಗುಲದ ಪುನರ್ ನವೀಕರಣ ಮತ್ತು ಬ್ರಹ್ಮಕಲಶೋತ್ಸವದ ಮೂರನೇ ದಿನವಾದ ಭಾನುವಾರ ಧಾರ್ಮಿಕ ಸಭೆಯಲ್ಲಿ ಉಪನ್ಯಾಸ ನೀಡಿದರು.
ಶತಮಾನದ ಇತಿಹಾಸವಿರುವ ವಾಟೆತ್ತಿಲ ದೇಗುಲವು ಪ್ರಕೃತಿ ಸೌಂದರ್ಯದ ತಾಣದಲ್ಲಿ ಸ್ಥಿತವಾಗಿದೆ. ಗ್ರಾಮದ ಏಕೈಕ ಸುಬ್ರಹ್ಮಣ್ಯ ಕ್ಷೇತ್ರ ಎಂಬ ಹೆಗ್ಗಳಿಕೆ ಹೊಂದಿರುವ ವಾಟೆತ್ತಿಲ ದೇಗುಲ ಗ್ರಾಮವಾಸಿಗಳ ಜೀವನದಲ್ಲಿ ಧಾರ್ಮಿಕತೆಯ ಅಂಶವನ್ನು ಬೆಳಗಿ, ಜ್ಞಾನದ ಹರಿವಿಗೆ ಸತ್ ಪ್ರೇರಣೆಯಾಗಲಿ ಎಂದು ಹರಸಿದರು. ಷಣ್ಮುಖನ ಆರು ಮುಖಗಳು ವೇದದ ಆರು ವಿಭಾಗಗಳನ್ನು ಸೂಚಿಸುತ್ತವೆ. ಮಾತ್ರವಲ್ಲದೆ ಈತ ಜ್ಞಾನದ ಸಂಕೇತವೂ, ಅರಿಷಡ್ವೈರಿಗಳನ್ನು ನಿಗ್ರಹಿಸಿದ ವೀರಾಗ್ರಣಿಯೂ ಆಗಿದ್ದಾನೆ. ದೇವನ ಸ್ಮರಣೆಯಿಂದ ಎಲ್ಲರಲ್ಲೂ ಜ್ಞಾನದ ವಿಕಾಸಯೊಂದಿಗೆ, ವೀರತ್ವದ ಗುಣಗಳು ಅವಿರ್ಭವಿಸಲಿ ಎಂದರು.
ಸಂಸ್ಕøತಿ ಮತ್ತು ಧರ್ಮದ ದ್ಯೋತಕವಾದ ಧರ್ಮಗ್ರಂಥಗಳು ದೇಶದ ಆಸ್ಥೆಯ ಭಾಗಗಳಾಗಿವೆ. ಭಗವದ್ಗೀತೆ, ರಾಮಾಯಣ, ಮಹಾಭಾರತ, ಸಹಸ್ರನಾಮಾವಳಿಗಳ ನಿರಂತರ ಶ್ರವಣ, ಪಠಣಗಳು ಪ್ರತಿ ಹಿಂದೂವಿನ ಮನೆಯಲ್ಲೂ ನಡೆಯಬೇಕಿದೆ. ಈ ಮೂಲಕ ಧಾರ್ಮಿಕ ಅಂಶಗಳ ಅಂತರ್ಗತ ಹರಿವು ನಮ್ಮೊಳಗಾಗುತ್ತದೆ ಎಂದು ಅವರು ನುಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಶ್ರೀ ಸತ್ಯಸಾಯಿ ಸೇವಾ ಸಂಸ್ಥೆಗಳು ಕಾಸರಗೋಡು ಜಿಲ್ಲಾಧ್ಯಕ್ಷ ಮಹಾಲಿಂಗ ಭಟ್ ಹಿರಣ್ಯ ಅವರು ಮಕ್ಕಳಲ್ಲಿ ಧಾರ್ಮಿಕತೆ, ನೈತಿಕ ಮೌಲ್ಯಗಳನ್ನು ಬೆಳೆಸುವ ಗುರುತರ ಜವಾಬ್ದಾರಿ ಪೆÇೀಷಕರದ್ದಾಗಿದೆ. ಎಳವೆಯಲ್ಲಿ ಮಕ್ಕಳ ಶಾಲಾ ಶಿಕ್ಷಣದೊಂದಿಗೆ, ಮನೆಯಿಂದಲೇ ಆರಂಭಗೊಳ್ಳುವ ನೀತಿಯ ಪಾಠಗಳು ಅತ್ಯವಶ್ಯಕ ಎಂದರು. ಮಕ್ಕಳ ಮೇಲೆ ಆಧುನಿಕತೆ ಬಹಳಷ್ಟು ಪ್ರಭಾವಿಸಿದೆ. ಮೊಬೈಲ್ ಪ್ರಪಂಚದಲ್ಲೇ ಕಾಲ ಕಳೆಯುವ ಮಕ್ಕಳು ಮೊಬೈಲಿನಲ್ಲಿ ಯಾವ ವಿಚಾರಗಳನ್ನು ಅರಸುತ್ತಾರೆ ಎಂಬುದನ್ನು ಗಮನಿಸುವ ಮತ್ತು ಸರಿಯಾದ ದಿಶೆಯಲ್ಲಿ ಮಾರ್ಗದರ್ಶನ ಮಾಡುವ ಹೊಣೆಯೂ ಪೆÇೀಷಕರದ್ದಾಗಿದೆ ಎಂದರು. ಸಮಾಜದಲ್ಲಿ ಉನ್ನತಿಯಲ್ಲಿ ಧರ್ಮಕ್ಷೇತ್ರಗಳ ಕೊಡುಗೆ ಅಪಾರವಾಗಿದ್ದು, ಮೌಲ್ಯಯುತ ಜೀವನಕ್ಕೆ ದೇಗುಲಗಳ ಪಾತ್ರ ಮಹತ್ತರವಾಗಿದೆ ಎಂದರು.
ಸದ್ರಿ ಕ್ಷೇತ್ರದ ಪುನರ್ ನವೀಕರಣ ಕಾರ್ಯದಲ್ಲಿ ಪ್ರತ್ಯಕ್ಷ ಪರೋಕ್ಷವಾಗಿ ಪಾಲ್ಗೊಂಡ ಪ್ರತಿಯೋರ್ವನಿಗೂ ದೇವರು ಒಳಿತನ್ನು ಮಾಡಲಿ ಎಂದು ಹರಸಿದರು. ಕಾರ್ಯಕ್ರಮದಲ್ಲಿ ಕರಾಡ ಬ್ರಾಹ್ಮಣ ಅಭ್ಯುದಯ ಸಂಘ ಅಗಲ್ಪಾಡಿ ಇದರ ಉಪಾಧ್ಯಕ್ಷ ಕೃಷ್ಣಮೂರ್ತಿ ಎಡೆಪ್ಪಾಡಿ, ಶ್ರೀ ಚಕ್ರಸಹಿತ ಮಹಾಲಿಂಗೇಶ್ವರ ಕ್ಷೇತ್ರ ಪದ್ಯಾಣ ಇದರ ಆಡಳಿತ ಮೊಕ್ತೇಸರ ಸತ್ಯನಾರಾಯಣ ಭಟ್, ಸ್ಥಳೀಯ ಗ್ರಾ.ಪಂ ಸದಸ್ಯೆ ಮಮತಾ ಪೂಜಾರಿ ಶುಭ ಹಾರೈಸಿದರು. ಈ ಸಂದರ್ಭ ಧರ್ಮಸ್ಥಳ ಧರ್ಮಾಧಿಕಾರಿ ಡಾ.ವೀರೇಂದ್ರ ಹೆಗ್ಗಡೆ ಅವರು ಕ್ಷೇತ್ರದ ಬ್ರಹ್ಮಕಲಶೋತ್ಸವದ ಸಂದರ್ಭ ಕಳುಹಿಸಿದ ಶುಭ ಸಂದೇಶವನ್ನು ಕ್ಷೇತ್ರ ನವೀಕರಣ ಸಮಿತಿ ಕಾರ್ಯದರ್ಶಿ ಶ್ರೀಕಾಂತ ವಿ ವಾಚಿಸಿದರು. ವೇದಿಕೆಯಲ್ಲಿ ಸುಬ್ರಹ್ಮಣ್ಯ ಭಟ್ ಸಜಂಕಿಲ ಉಪಸ್ಥಿತರಿದ್ದರು. ತೇಜಸ್ವಿನಿ ಎನ್.ವಿ ಕಾರ್ಯಕ್ರಮದ ಆರಂಭದಲ್ಲಿ ಪ್ರಾರ್ಥನೆ ಹಾಡಿದರು. ರಮೇಶ್ ಮಾಸ್ಟರ್ ಸ್ವಾಗತಿಸಿದರು. ವಾರಿಜಾ ಭಟ್ ಧನ್ಯವಾದ ನೀಡಿದರು. ಉಮಾದೇವಿ ಕಾರ್ಯಕ್ರಮ ನಿರೂಪಿಸಿದರು.
ಸ್ಕಂದಗೀತಾ- ಶ್ರೀ ಸುಬ್ರಹ್ಮಣ್ಯೇಶ್ವರ ದೇವರ ಗುಣಗಾನ ಮಾಡುವ ಸುಂದರ ಹಾಡಿನ ಯೂಟ್ಯೂಬ್ ಅವತರಣಿಕೆಯನ್ನು ಧಾರ್ಮಿಕ ಉಪನ್ಯಾಸ ನೀಡಿದ ಡಾ.ಪ್ರದೀಪ ಆಟಿಕುಕ್ಕೆ ಬಿಡುಗಡೆಗೊಳಿಸಿದರು. ಆರ್.ಎಸ್ ಮೀಡಿಯಾ ಮತ್ತು ಶ್ರೀ ಸುಬ್ರಹ್ಮಣ್ಯೇಶ್ವರ ಕಂಬೈನ್ಸ್ ಜಂಟಿಯಾಗಿ ನಿರ್ಮಿಸಿದ ಧ್ವನಿ ಮತ್ತು ವಿಡಿಯೋ ಅವತರಣಿಕೆಯಲ್ಲಿ ಯುವಪ್ರತಿಭೆ ಕು.ತೇಜಸ್ವಿನಿ ಎನ್.ವಿ ಅವರ ಸ್ವರಚಿತ ಸ್ಕಂದ ಗೀತಾವನ್ನು ಸೊಗಸಾಗಿ ಹಾಡಿದ್ದಾರೆ. ಗುರುಬಾಯಾರು ಸಂಗೀತ ನಿರ್ದೇಶನ ಮಾಡಿದ್ದಾರೆ. ವಾಟೆತ್ತಿಲ ಕ್ಷೇತ್ರದಲ್ಲಿ ಹಲವು ದಶಕಗಳ ಕಾಲ ಅರ್ಚಕರಾಗಿ ಸೇವೆ ಸಲ್ಲಿಸಿ, ಸಮಾಜದ ಒಡಿನಾಡಿಯಾಗಿದ್ದ ದಿ.ಗಣಪತಿ ಭಟ್ ಅವರಿಗೆ ನೆನಪಿನಲ್ಲಿ ಸ್ಕಂದ ಗೀತ ಅರ್ಪಿಸಲಾಗಿದೆ. ನಾಟ್ಯ ವಿದುಷಿ ಸುಮಂಗಲ ರತ್ನಾಕರ್ ಶುಭ ಹಾರೈಸಿದ್ದಾರೆ. ಬ್ರಹ್ಮಕಲಶ ಸಮಿತಿ ಮತ್ತು ಸ್ಥಳೀಯ ಸಂಘಟನೆಗಳಿಗೆ ಕೃತಜ್ಞತೆ ಸಲ್ಲಿಸಲಾಗಿದೆ.