ಬದೌನ್: ಆಧಾರ್ ಕಾರ್ಡ್‌ನಲ್ಲಿ ಮಗುವಿನ ಹೆಸರನ್ನು 'ಮಧು ಕಾ ಪಾಂಚ್ವಾ ಬಚ್ಚಾ' ಎಂದು ನಮೂದಿಸಿದ್ದನ್ನು ಗಂಭೀರವಾಗಿ ಪರಿಗಣಿಸಿರುವ ಜಿಲ್ಲಾ ಮ್ಯಾಜಿಸ್ಟ್ರೇಟ್ ದೀಪಾ ರಂಜನ್, ಈ ವಿಷಯದ ಬಗ್ಗೆ ತನಿಖೆ ಪ್ರಾರಂಭಿಸಿದ್ದಾರೆ.
ಮಗುವಿನ ಆಧಾರ್ ಕಾರ್ಡ್ ತಯಾರಿಸಿದವರು ಮಾಡಿರುವುದು 'ತೀವ್ರ ನಿರ್ಲಕ್ಷ್ಯ'ವನ್ನು ಸೂಚಿಸುತ್ತದೆ.
ಮಗುವನ್ನು ಶಾಲೆಗೆ ದಾಖಲಿಸಿಕೊಳ್ಳಲು ಹೆಸರು ಗಮನಿಸಿದಾಗ, ಆಧಾರ್ ಕಾರ್ಡ್‌ನಲ್ಲಿ ಹೆಸರು ಇರುವ ಜಾಗದಲ್ಲಿ 'ಮಧು ಕಾ ಪಾಂಚ್ವಾ ಬಚ್ಚಾ' ಎಂದೂ, ಇಂಗ್ಲಿಷ್‌ನಲ್ಲಿ 'ಬೇಬಿ ಫೈವ್ ಆಫ್ ಮಧು' ಎಂದು ಬರೆಯಲಾಗಿದೆ. ಇದರಿಂದ ಮಗುವಿಗೆ ಸರ್ಕಾರಿ ಶಾಲೆಯಲ್ಲಿ ಪ್ರವೇಶವನ್ನು ನಿರಾಕರಿಸಲಾಗಿದೆ.
ಅಲ್ಲದೆ, ಆಧಾರ್ ನಂಬರ್ ಕೂಡ ಕಾರ್ಡ್‌ನಲ್ಲಿ ಇರಲಿಲ್ಲ.
ಮಗುವಿನ ತಂದೆ ದಿನೇಶ್, ತಾವು ಅಕ್ಷರಸ್ಥರಲ್ಲ, ಹೀಗಾಗಿ ಕಾರ್ಡ್‌ನಲ್ಲಿನ ವ್ಯತ್ಯಾಸಗಳನ್ನು ಅರ್ಥಮಾಡಿಕೊಳ್ಳಲು ಸಾಧ್ಯವಾಗಿಲ್ಲ ಎಂದು ಮಂಗಳವಾರ ತಿಳಿಸಿದ್ದಾರೆ.
'ಅವರು (ಆಧಾರ್ ಅಧಿಕಾರಿಗಳು) ನಮಗೆ ಮಗುವಿನ ಹೆಸರನ್ನು ಕೇಳಿದರು. ಮಗುವಿಗೆ ಇನ್ನೂ ಹೆಸರಿಸದ ಕಾರಣ, ನಾವು ಆಕೆ ನಮ್ಮ ಐದನೇ ಮಗು ಎಂದು ಹೇಳಿದೆವು. ನಂತರ ಇದು ದೊಡ್ಡ ಸಮಸ್ಯೆಯಾಗಲಿದೆ ಎಂಬುದು ನನಗೆ ತಿಳಿದಿರಲಿಲ್ಲ' ಎಂದು ಸುದ್ದಿಗಾರರಿಗೆ ತಿಳಿಸಿದ್ದಾರೆ.
ಅಂಚೆ ಕಚೇರಿ, ಬ್ಯಾಂಕ್‌ಗಳಲ್ಲಿ ಆಧಾರ್ ಕಾರ್ಡ್ ಸಿದ್ಧಪಡಿಸಲಾಗುತ್ತಿದೆ. ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿದ್ದರಿಂದ ಈ ಪ್ರಮಾದ ಸಂಭವಿಸಿದೆ. ಬ್ಯಾಂಕ್ ಮತ್ತು ಅಂಚೆ ಕಚೇರಿ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿ ನಿರ್ಲಕ್ಷ್ಯ ತೋರಿದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.
ಇತರ ಕಾರ್ಡ್‌ಗಳಲ್ಲಿಯೂ ಇದೇ ರೀತಿಯ ವ್ಯತ್ಯಾಸಗಳು ಸಂಭವಿಸಿದೆಯೇ ಎಂದು ನೋಡಲು ಪ್ರಯತ್ನಿಸಲಾಗುವುದು ಎಂದು ಅವರು ಹೇಳಿದರು.