ಪಾಲಕ್ಕಾಡ್ (ಪಿಟಿಐ): ಕೇರಳದ ಪಾಲಕ್ಕಾಡ್‌ನಲ್ಲಿ ನಡೆದ ಪೀಪಲ್ ಫ್ರಂಟ್ ಆಫ್ ಇಂಡಿಯಾದ ನಾಯಕ ಸುಬೈರ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ, ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಮೂವರು ಕಾರ್ಯಕರ್ತರನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಈ ಬಗ್ಗೆ ಮಾಹಿತಿ ನೀಡಿದ ಎಡಿಜಿಪಿ (ಕಾನೂನು ಮತ್ತು ಸುವ್ಯವಸ್ಥೆ) ವಿಜಯ್ ಸಾಖರೆ, 'ರಮೇಶ್, ಆರುಮುಗನ್ ಹಾಗೂ ಸರವಣನ್ ಬಂಧಿತ ಆರೋಪಿಗಳಾಗಿದ್ದು, ಇವರು ನವೆಂಬರ್‌ನಲ್ಲಿ ಹತ್ಯೆಗೀಡಾದ ಆರ್‌ಎಸ್‌ಎಸ್ ಕಾರ್ಯಕರ್ತ ಸಂಜಿತ್ ಅವರ ಸ್ನೇಹಿತರು. ಸಂಜಿತ್ ಕೊಲೆಗೆ ಸೇಡು ತೀರಿಸಿಕೊಳ್ಳಲು, ಈ ಮೂವರು ಪಿಎಫ್‌ಐ ನಾಯಕ ಸುಬೈರ್‌ನನ್ನು ಹತ್ಯೆ ಮಾಡಿದ್ದಾರೆ ಎಂದು ಶಂಕಿಸಲಾಗಿದೆ. ಆದರೆ, ಸಂಜಿತ್ ಕೊಲೆ ಪ್ರಕರಣದಲ್ಲಿ ಸುಬೈರ್‌ನ ಪಾತ್ರವಿದೆ ಎಂಬುದು ಖಚಿತವಾಗಿಲ್ಲ' ಎಂದು ಹೇಳಿದರು.
'ರಮೇಶ್ ಹಾಗೂ ಅವರ ಸ್ನೇಹಿತರು, ಸುಬೈರ್ ಕೊಲ್ಲಲು ಎರಡು ಬಾರಿ ಪ್ರಯತ್ನಿಸಿ ಸೋತಿದ್ದರು. ಆದರೆ, ಮೂರನೇ ಬಾರಿ ಬಾರಿ ಅವಕಾಶ ಸಿಕ್ಕ ಕೂಡಲೇ ಕೊಲೆ ಮಾಡಿದ್ದರು. ಈ ಹತ್ಯೆ ಪ್ರಕರಣದಲ್ಲಿ ಬೇರೆಯವರು ಭಾಗಿಯಾಗಿದ್ದಾರೆ ಎಂಬುದರ ಬಗ್ಗೆ ತನಿಖೆ ನಡೆಸುತ್ತಿದ್ದೇವೆ' ಎಂದು ಸಾಖರೆ ತಿಳಿಸಿದರು.