ನವದೆಹಲಿ: ಪ್ರಪ್ರಥಮ ಸ್ವದೇಶಿ ನಿರ್ಮಿತ ಡಾರ್ನಿಯರ್ ವಿಮಾನ ಇಂದಿನಿಂದ ವಾಣಿಜ್ಯ ಹಾರಾಟವನ್ನು ಆರಂಭಿಸಿದ್ದು, ಈಶಾನ್ಯ ರಾಜ್ಯಗಳಿಗೆ ದೇಶದ ಇತರ ಭಾಗಗಳೊಂದಿಗೆ ಸಂಪರ್ಕ ವೃದ್ಧಿಸುವ ವಾಯುಯಾನ ಸೌಲಭ್ಯವನ್ನು ಒದಗಿಸಲು ಮುಂದಾಗಿದೆ.
ನವದೆಹಲಿ: ಪ್ರಪ್ರಥಮ ಸ್ವದೇಶಿ ನಿರ್ಮಿತ ಡಾರ್ನಿಯರ್ ವಿಮಾನ ಇಂದಿನಿಂದ ವಾಣಿಜ್ಯ ಹಾರಾಟವನ್ನು ಆರಂಭಿಸಿದ್ದು, ಈಶಾನ್ಯ ರಾಜ್ಯಗಳಿಗೆ ದೇಶದ ಇತರ ಭಾಗಗಳೊಂದಿಗೆ ಸಂಪರ್ಕ ವೃದ್ಧಿಸುವ ವಾಯುಯಾನ ಸೌಲಭ್ಯವನ್ನು ಒದಗಿಸಲು ಮುಂದಾಗಿದೆ.
ಅರುಣಾಚಲ ಪ್ರದೇಶದ ದೂರದ ಪ್ರದೇಶದ ಐದು ಪಟ್ಟಣಗಳೊಂದಿಗೆ ಅಸ್ಸಾಮ್ನ ದಿಬ್ರುಘರ್ಗೆ ಸಂಪರ್ಕ ಕಲ್ಪಿಸುವ ಈ ಮೇಡ್ ಇನ್ ಇಂಡಿಯಾ ಡಾರ್ನಿಯರ್ ವಿಮಾನ 17 ಸೀಟುಗಳನ್ನು ಹೊಂದಿದೆ.
ನಾಗರಿಕ ವಿಮಾನಯಾನ ಸಚಿವಾಲಯವು ಈಶಾನ್ಯ ರಾಜ್ಯಗಳಿಗೆ ವಾಯಯಾನ ಸಂಪರ್ಕ ಮತ್ತು ವಿಮಾನಯಾನ ಮೂಲಸೌಕರ್ಯ ಕಲ್ಪಿಸುವ ಯೋಜನೆಗೆ ಮಾನ್ಯತೆ ನೀಡಿದ್ದು, ಅದರನ್ವಯ ಈ ವಿಮಾನ ಹಾರಾಟವನ್ನು ಆರಂಭಿಸಲಾಗಿದೆ.
ಹಿಂದುಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ ನಿರ್ಮಿಸಿರುವ ಡಾರ್ನಿಯರ್ ಡು-228 ವಿಮಾನವು ಅಲಯನ್ಸ್ ಏರ್ ಮೂಲಕ ಅಸ್ಸಾಮ್ನ ದಿಬ್ರುಘರ್ನಿಂದ ಅರುಣಾಚಲ ಪ್ರದೇಶದ ಪಾಸಿಘಾಟ್ ಮಧ್ಯೆ ಸಂಚರಿಸಲಿದೆ. ಅದಕ್ಕಾಗಿ ಅಲಯನ್ಸ್ ಏರ್ಗೆ ಎರಡು ವಿಮಾನಗಳನ್ನು ಒಪ್ಪಂದದ ಮೇರೆಗೆ ನೀಡಲಾಗಿದೆ ಎಂದು ಮೂಲಗಳು ತಿಳಿಸಿವೆ.
ಡಾರ್ನಿಯರ್ ಮೂಲತಃ ಜರ್ಮನಿ ನಿರ್ಮಿತ ವಿಮಾನವಾಗಿದ್ದು, 1981ರಲ್ಲಿ ಎಚ್ಎಎಲ್ ಇದರ ಉತ್ಪಾದನೆ ಪರವಾನಗಿ ಪಡೆದು ಅಸೆಂಬ್ಲ್ ಮಾಡುತ್ತಿತ್ತು. ಕಾನ್ಪುರದಲ್ಲಿ ಅಂಥ 125 ವಿಮಾನಗಳನ್ನು ನಾಗರಿಕ ಹಾಗೂ ಸೇನಾ ಹಾರಾಟಕ್ಕಾಗಿ ಮಾಡಿಕೊಡಲಾಗಿತ್ತು. 2009ರಿಂದ ಸ್ವಿಸ್ ಏರೋಸ್ಪೇಸ್ ಇಂಜಿನಿಯರಿಂಗ್ ಆಯಂಡ್ ಡಿಫೆನ್ಸ್ ಕಂಪನಿ ಆರ್ಯುಎಜಿ ಸುಧಾರಿತ ಡಾರ್ನಿಯರ್ ಡು-228 ನ್ಯೂ ಜನರೇಷನ್ (ಎನ್ಜಿ) ಫ್ಯೂಸಲೇಜ್, ವಿಂಗ್ಸ್ ಮತ್ತು ಟೇಲ್ಸ್ ಎಚ್ಎಎಲ್ನಿಂದ ಪಡೆದು ನಿರ್ಮಿಸುತ್ತಿತ್ತು. ಆದರೆ ಇದೀಗ ವಾಣಿಜ್ಯ ಹಾರಾಟಕ್ಕೆ ಬಿಡಲಾಗಿರುವ ಡಾರ್ನಿಯರ್ 228 ಎನ್ಜಿ ಸಂಪೂರ್ಣವಾಗಿ ಸ್ವದೇಶದಲ್ಲೇ ನಿರ್ಮಿಸಲ್ಪಟ್ಟಿರುವ ಪ್ರಪ್ರಥಮ ವಿಮಾನವಾಗಿದೆ.