ಕಾಸರಗೋಡು: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ.ಟ್ರಸ್ಟ್ ಚಂದ್ರಗಿರಿ ಪ್ರಾದೇಶಿಕ ಸಮಿತಿಯ ನೂತನ ಗ್ರಾಮಾಭಿವೃದ್ಧಿ ಗುಂಪುಗಳ ರಚನೆ, ಸಂಸ್ಥೆಯ ಐವರು ಸದಸ್ಯರಿಗೆ ದ್ವಿಚಕ್ರ ವಾಹನಗಳ ವಿತರಣೆ, ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ, ಒಕ್ಕೂಟ ಪದಗ್ರಹಣ ಸಮಾರಂಭ ಕಾಞಂಗಾಡ್ ಶ್ರೀ ಕೃಷ್ಣ ಮಂದಿರದಲ್ಲಿ ಜರುಗಿತು.
ಸಂಸದ ರಾಜಮೋಹನ್ ಉಣ್ಣಿತ್ತಾನ್ ಉದ್ಘಾಟಿಸಿದರು. ಶಾಲಿನಿ ಗಿರೀಶನ್ ಅಧ್ಯಕ್ಷತೆ ವಹಿಸಿದ್ದರು. ಉಡುಪಿ ಪ್ರಾದೇಶಿಕ ನಿರ್ದೇಶಕ ವಸಂತ ಸಾಲಿಯಾನ್ ಮುಖ್ಯ ಅತಿಥಿಯಾಗಿದ್ದರು.ನಿರ್ದೇಶಕ ಪ್ರವೀಣ್ ಕುಮಾರ್, ಕೆ.ಪಿ.ಬಾಲಕೃಷ್ಣನ್, ಜಿಲ್ಲಾ ಜನಜಾಗೃತಿ ವೇದಿಕೆ ಅಧ್ಯಕ್ಷ ಅಶ್ವತ್ ಪೂಜಾರಿ, ಎಚ್.ಆರ್.ಶ್ರೀಧರ್, ಗ್ರಾಮಾಭಿವೃದ್ಧಿ ಸಮಿತಿ ಜಿಲ್ಲಾ ಸಂಚಾಲಕ ಪ್ರವೀಣ್ ಕುಮಾರ್, ಕೆ.ಪಿ.ಬಾಲಕೃಷ್ಣನ್ ಉಪಸ್ಥಿತರಿದ್ದರು. ಈ ಸಂದರ್ಭ ಸಮಿತಿಯ 15 ಹೊಸ ಗುಂಪುಗಳ ಉದ್ಘಾಟನೆ ನಡೆಯಿತು. ಸಂಸ್ಥೆಯ 5 ಮಂದಿಗೆ ದ್ವಿಚಕ್ರ ವಾಹನ ವಿತರಿಸಲಾಯಿತು. ಕಾಞಂಗಾಡ್ ಚಾಮುಂಡಿಕುನ್ನು ಮತ್ತು ಪಳ್ಳಿಕ್ಕರ ಗುಂಪುಗಳನ್ನು ಒಕ್ಕೂಟದಲ್ಲಿ ವಿಲೀನಗೊಳಿಸುವುದರೊಂದಿಗೆ ಕಲ್ಯಾಣ್ ರೋಡ್ ಗ್ರೂಪ್ ಏಕ ಒಕ್ಕೂಟವಾಗಿ ಪರಿವರ್ತನೆಗೊಂಡಿದೆ.
ಕಾಸರಗೋಡು ಯೋಜನಾಧಿಕಾರಿ ಮುಖೇಶ್ ಕಾಸರಗೋಡು ಸ್ವಾಗತಿಸಿದರು. ಚಂದ್ರಗಿರಿ ವಲಯ ಮೇಲ್ವಿಚಾರಕ ಎಂ.ಬಾಲಕೃಷ್ಣನ್ ವಂದಿಸಿದರು ಪ್ರಗತಿ ಬಂಧು ಸ್ವಸಹಾಯ ಸಂಘ ಕಾಞಂಗಾಡ್, ಕಲ್ಯಾಣ್ ರಸ್ತೆ, ಚಾಮುಂಡಿಕುನ್ನು ಮತ್ತು ಪಳ್ಳಿಕ್ಕರ ಸಂಯುಕ್ತಾಶ್ರಯದಲ್ಲಿ ಧರ್ಮಸ್ಥಳದ ಧರ್ಮಾಧಿಕಾರಿ ರಾಜರ್ಷಿ ಡಾ.ಡಿ.ವೀರೇಂದ್ರ ಹೆಗ್ಗಡೆ-ಹೇಮಾವತಿ ವೀರೇಂದ್ರ ಹೆಗ್ಗಡೆಯವರ ಶುಭಾಶೀರ್ವಾದದೊಂದಿಗೆ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ ಆಯೋಜಿಸಲಾಗಿತ್ತು.