ನವದೆಹಲಿ: ಕಾಂಗ್ರೆಸ್ ಪಕ್ಷದ ಭವಿಷ್ಯದ ಕಾರ್ಯತಂತ್ರ ಕುರಿತಂತೆ ಪಕ್ಷದೊಳಗೆ ಧೀರ್ಘ ಸಮಾಲೋಚನೆ ಹಾಗೂ ಚುನಾವಣಾ ತಂತ್ರಜ್ಞ ಪ್ರಶಾಂತ್ ಕಿಶೋರ್ ನೀಡಿರುವ ಯೋಜನೆಯ ಬಗ್ಗೆ ಚರ್ಚೆ ನಡೆಯುತ್ತಿರುವಂತೆಯೇ, ರಾಜಸ್ಥಾನದ ಮಾಜಿ ಉಪ ಮುಖ್ಯಮಂತ್ರಿ ಸಚಿನ್ ಪೈಲಟ್ ಗುರುವಾರ ಕಾಂಗ್ರೆಸ್ ಪಕ್ಷದ ಹಂಗಾಮಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರನ್ನು ಭೇಟಿಯಾಗಿದ್ದಾರೆ.
ಕಾಂಗ್ರೆಸ್ ಆಡಳಿತವಿರುವ ರಾಜಸ್ಥಾನದ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಹಾಗೂ ಛತ್ತೀಸ್ ಗಢ ಮುಖ್ಯಮಂತ್ರಿ ಭೂಪೇಶ್ ಬಾಘೇಲ್ ಅವರನ್ನು ಸೋನಿಯಾ ಗಾಂಧಿ ಭೇಟಿಯಾದ ಮಾರನೇ ದಿನವೇ ಸಚಿನ್ ಪೈಲಟ್ ಸೋನಿಯಾಗಾಂಧಿ ಅವರನ್ನು ಭೇಟಿಯಾಗಿದ್ದಾರೆ. ಗುರುವಾರ ಸಂಜೆ ಸೋನಿಯಾಗಾಂಧಿ ಅವರ 10 ಜನಪಥ್ ನಿವಾಸಕ್ಕೆ ಪೈಲಟ್ ತೆರಳಿ ಮಾತುಕತೆ ನಡೆಸಿದ್ದಾರೆ.
ಈ ತಿಂಗಳ ಆರಂಭದಲ್ಲಿ ರಾಹುಲ್ ಗಾಂಧಿ ಹಾಗೂ ಪ್ರಿಯಾಂಕಾ ಗಾಂಧಿ ವಾದ್ರಾ ಅವರನ್ನು ಪೈಲಟ್ ಭೇಟಿಯಾಗಿದ್ದರು. ರಾಜಸ್ಥಾನದಲ್ಲಿ ಪಕ್ಷ ಸಂಘಟನೆ, ಪದಾಧಿಕಾರಿಗಳ ಚುನಾವಣೆ, ಗುಜರಾತ್, ಹಿಮಾಚಲ ಪ್ರದೇಶದಲ್ಲಿನ ಮುಂಬರುವ ಚುನಾವಣೆ ಕುರಿತಂತೆ ಚರ್ಚೆ ನಡೆಸಲಾಗಿತ್ತು ಎಂದು ಮೂಲಗಳು ಹೇಳಿವೆ.
ರಾಜಸ್ಥಾನದಲ್ಲಿ ಪಕ್ಷ ಸಂಘಟನೆಯಲ್ಲಿ ಪೈಲಟ್ ತೊಡಗಿಸಿಕೊಂಡಿದ್ದಾರೆ ಆದರೆ, ಪಕ್ಷ ವಹಿಸುವ ಯಾವುದೇ ಹೊಣೆಯನ್ನು ಹೊರಲು ಅವರು ಒಲವು ಹೊಂದಿದ್ದಾರೆ ಎಂದು ಪೈಲಟ್ ಅವರ ಆಪ್ತ ಮೂಲಗಳು ತಿಳಿಸಿವೆ.