ಮಂಜೇಶ್ವರ: ಕೇರಳದ ನೆರೆ ರಾಜ್ಯವಾದ ಕರ್ನಾಟಕದ ಹಲವೆಡೆ ಕ್ಷೇತ್ರೋತ್ಸವದಲ್ಲಿ ಮುಸಲ್ಮಾನರು ವ್ಯಾಪಾರ ಮಾಡಬಾರದು ಮಾತ್ರವಲ್ಲದೆ ಅವರು ಹೊಟ್ಟೆಪಾಡಿಗಾಗಿ ಮಾರಾಟಕ್ಕಾಗಿ ತಂದಿರಿಸಿದ ಸಾಮಾಗ್ರಿಗಳನ್ನು ನಾಶ ಗೊಳಿಸುತ್ತಿರುವ ವಿಕೃತ ಮನಸ್ಸುಗಳ ಭಯಾನಕ ಕೃತ್ಯಗಳ ಮಧ್ಯೆ ಕೇರಳ ಕರ್ನಾಟಕ ಗಡಿ ಪ್ರದೇಶವಾದ ಮಂಜೇಶ್ವರಕ್ಕೆ ಸಮೀಪದ ಉದ್ಯಾವರದ ಶ್ರೀ ಅರಸು ಮಂಜಿಷ್ಣಾರ್ ಕ್ಷೇತ್ರದಲ್ಲಿ ಮುಸ್ಲಿಂ ಸಮುದಾಯಕ್ಕೊಳಪಟ್ಟ ವ್ಯಕ್ತಿಯಿಂದಲೇ ಸಂತೆಯನ್ನು ಸ್ಥಾಪಿಸಿ ಅಲ್ಲಿಂದಲೇ ಕ್ಷೇತ್ರದ ದೈವಗಳು ತೆಂಗಿನ ಕಾಯಿ ಹಾಗು ವೀಳ್ಯದೆಲೆ ಖರೀದಿಸಿ ಕ್ಷೇತ್ರದ ಉತ್ಸವಕ್ಕೆ ದಿನನಿಶ್ಚಯ ಮಾಡುವ ಮೂಲಕ ಬ್ಯಾರಿ ಸಮುದಾಯದವರ ವ್ಯಾಪಾರಕ್ಕೆ ನಮ್ಮದೇನು ಅಡ್ಡಿಯಿಲ್ಲವೆಂಬುದಾಗಿ ಸಾರುವ ಸಾಮರಸ್ಯಕ್ಕೆ ಸಾಕ್ಷಿಯಾಗುವಂತಹ ಕಾರ್ಯಕ್ರಮ ನಡೆಯಿತು.
ಸುದೀರ್ಘ ಕೋವಿಡ್ ನ ಬಳಿಕ ವಾಡಿಕೆಯಂತೆ ಈ ವರ್ಷ ಕೂಡಾ ಉದ್ಯಾವರ ಶ್ರೀ ಅರಸು ಕ್ಷೇತ್ರದ ಜಾತ್ರೆಗೆ ದಿನ ನಿಶ್ಚಯ ನಡೆದಿದೆ. ಸಿಂಹಾಸನ ಕಟ್ಟೆಯ ಒಂದು ಭಾಗದಲ್ಲಿ ಭಾಗದಲ್ಲಿ ಉದ್ಯಾವರ ಸಾವಿರ ಜಮಾಅತ್ ಗೊಳಪಟ್ಟ ಮುಸಲ್ಮಾನರು ಹಾಗೂ ಇನ್ನೊಂದು ಭಾಗದಲ್ಲಿ ಬ್ರಹ್ಮಸಭೆ ಅಂದರೆ ಕ್ಷೇತ್ರಕ್ಕೆ ಸಂಬಂಧಪಟ್ಟವರು ಕುಳಿತುಕೊಂಡು ಬಳಿಕ ದಿನ ಕಟ್ಟೆಯ ಮುಂಭಾಗದಲ್ಲಿ ಪಾತ್ರಿಗಳ ಆಗಮನದೊಂದಿಗೆ ದಿನ ನಿಶ್ಚಯವನ್ನು ಓದಿ ಹೇಳಲಾಯಿತು. "ಕುದಿಕಳ" ಎಂಬುದಾಗಿ ಕರೆಯಲ್ಪಡುವ ಈ ಕಾರ್ಯಕ್ರಮದಲ್ಲಿ ಉದ್ಯಾವರ ಜಮಾಹತಿಗೊಳಪಟ್ಟ ಅನುವಂಶೀಯ ಕುಟುಂಬಗೊಳಪಟ್ಟ ಮುಸಲ್ಮಾನ ಇಲ್ಲಿ ವೀಳ್ಯದೆಲೆ ಹಾಗೂ ತೆಂಗಿನ ಕಾಯಿ ಮಾರಾಟ ನಡೆಸಬೇಕಾಗಿದೆ. ಇದರಂತೆ ಸಯ್ಯದ್ ಎಂಬಾತ ನಡೆಸುತ್ತಿರುವ ವ್ಯಾಪಾರಕ್ಕೆ ಕ್ಷೇತ್ರದ ಅಣ್ಣ ತಮ್ಮ ದೈವಗಳು ಆಗಮಿಸಿ ಸಾಮಾಗ್ರಿ ಖರೀದಿಸಿ ಆಶೀರ್ವಾದವನ್ನು ನೀಡಿದೆ. ಮಾರಾಟವಾದ ನಾಲ್ಕು ತೆಂಗಿನಕಾಯಿಗಳ ಪೈಕಿ ಎರಡೆರಡನ್ನು ಅಣ್ಣ ದೈವ ಹಾಗೂ ತಮ್ಮ ದೈವ ಖರೀದಿಸಿ ತೆಂಗಿನಕಾಯಿ ಒಡೆಯುವ ಸ್ಪರ್ಧೆ ಏರ್ಪಟ್ಟಿತ್ತು. ಮುಂದಿನ ವಾರದಲ್ಲಿ ದೈವಗಳ ಉದಾಯವರ ಸಾವಿರ ಜಮಾಹತ್ ಭೇಟಿ ನಡೆಯಲಿದೆ. ಮೇ ತಿಂಗಳ 9 ರಿಂದ 12 ರ ತನಕ ಕ್ಷೇತ್ರದಲ್ಲಿ ಉತ್ಸವ ನಡೆಯಲಿದೆ.