ನವದೆಹಲಿ: ಫಿರ್ಯಾದುದಾರರಿಗೆ ಹಿತಕರವಾದ ವಾತಾವರಣ ಸೃಷ್ಟಿಸಬೇಕು ಮತ್ತು ಮಾನವೀಯವಾಗಿರಬೇಕು ಎಂದು ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಎನ್.ವಿ. ರಮಣ ಅವರು ಜಿಲ್ಲಾ ನ್ಯಾಯಾಧೀಶರಿಗೆ ಶುಕ್ರವಾರ ಕರೆ ಕೊಟ್ಟಿದ್ದಾರೆ.
'ವಿವಾದದ ಮಾನವೀಯ ಮುಖ ವನ್ನು ಸದಾ ನೆನಪಿನಲ್ಲಿ ಇರಿಸಿಕೊಳ್ಳಿ.
ಹೈದರಾಬಾದ್‌ನಲ್ಲಿ ನಡೆದ ತೆಲಂಗಾಣ ರಾಜ್ಯ ನ್ಯಾಯಾಂಗದ ಅಧಿ ಕಾರಿಗಳ ಸಮಾವೇಶವನ್ನು ಉದ್ಘಾಟಿಸಿ ರಮಣ ಮಾತನಾಡಿದ್ದಾರೆ. ಜಿಲ್ಲಾ ನ್ಯಾಯಾಂಗ ವ್ಯವಸ್ಥೆಯು ನ್ಯಾಯಾಂಗದ ತಳಹದಿಯಾಗಿದೆ. ತಳಹದಿಯು ಗಟ್ಟಿಯಾಗಿದ್ದಾಗ ಮಾತ್ರ ವ್ಯವಸ್ಥೆಯು ಬೆಳೆಯುತ್ತದೆ. ಈ ದಿಸೆಯಲ್ಲಿ ಎಲ್ಲರೂ ಕೆಲಸ ಮಾಡಬೇಕು ಎಂದು ಅವರು ಹೇಳಿದ್ದಾರೆ.
ಮುಖ್ಯ ನ್ಯಾಯಮೂರ್ತಿಗಳು ಮತ್ತು ಮುಖ್ಯಮಂತ್ರಿಗಳ ಜಂಟಿ ಸಮಾವೇಶ ನಡೆಸುವ ಬಗ್ಗೆ ಕ್ರಮ ಕೈಗೊಳ್ಳಲಾಗಿದೆ. ಈ ತಿಂಗಳ ಕೊನೆಗೆ ಇದು ನಡೆಯಲಿದೆ. ನ್ಯಾಯಾಲಯದ ಮೂಲಸೌಕರ್ಯ ಮತ್ತು ಇತರ ಸಮಸ್ಯೆಗಳ ಬಗ್ಗೆ ಈ ಸಮಾ ವೇಶದಲ್ಲಿ ಚರ್ಚೆ ಆಗಲಿದೆ ಎಂದರು.
ನ್ಯಾಯಾಧೀಶರ ಮೇಲೆ ನಡೆಯುವ ದೈಹಿಕ ಹಲ್ಲೆಗಳ ಕುರಿತೂ ಅವರು ಮಾತನಾಡಿದರು. 'ಇಂತಹ ಘಟನೆಗಳು ನಡೆಯುವುದನ್ನು ತಡೆಯಲು ನನ್ನಿಂದಾದ ಎಲ್ಲವನ್ನೂ ಮಾಡಿದ್ದೇನೆ. ನ್ಯಾಯಾಲಯದ ಅಧಿಕಾರಿಗಳಿಗೆ ನ್ಯಾಯಾಲಯದ ಒಳಗೆ ಮತ್ತು ಹೊರಗೆ ಭದ್ರತೆಯನ್ನು ಉತ್ತಮಪಡಿಸುವುದಕ್ಕೆ ಅಗತ್ಯವಾದ ನಿರ್ದೇಶನಗಳನ್ನು ನೀಡಿದ್ದೇನೆ' ಎಂದರು.
ನ್ಯಾಯಾಧೀಶರನ್ನು ಅವರು ಕೊಟ್ಟ ತೀರ್ಪಿನ ಗುಣಮಟ್ಟದ ಆಧಾರದಲ್ಲಿ ಮಾತ್ರ ಮೌಲ್ಯಮಾಪನ ಮಾಡಲು ಸಾಧ್ಯವಿಲ್ಲ. ಅವರ ವ್ಯಕ್ತಿತ್ವ, ಪಾರದರ್ಶಕತೆ, ಪ್ರಶ್ನಾತೀತ ಬದ್ಧತೆಯೂ ಅಷ್ಟೇ ಮುಖ್ಯ ಎಂದು ರಮಣ ಪ್ರತಿಪಾದಿಸಿದ್ದಾರೆ.
'ಸಾಂಕ್ರಾಮಿಕದ ಭೀತಿಯಿಂದ ನೀವೆಲ್ಲರೂ ಹೊರಗೆ ಬರಬೇಕು. ನ್ಯಾಯಾಲಯದ ನಿಗದಿತ ಅವಧಿಯಲ್ಲದೆ, ಇನ್ನೂ ಹೆಚ್ಚಿನ ಸಮಯವನ್ನು ಕೋರ್ಟ್‌ಗೆ ಒದಗಿಸಲು ಪ್ರಾಮಾಣಿಕವಾಗಿ ಪ್ರಯತ್ನಿಸಿ' ಎಂದು ಅವರು ಹೇಳಿದರು.
ಕಕ್ಷಿದಾರರು ಎದುರಿಸುವ ವಿವಿಧ ಸಮಸ್ಯೆಗಳ ಬಗ್ಗೆ ಜಾಗೃತಿ ಮೂಡಿ ಸಿಕೊಳ್ಳಿ, ಎಲ್ಲರನ್ನೂ ಗೌರವದಿಂದ ನೋಡಿ. ಕಿರಿಯರು, ದುರ್ಬಲ ವರ್ಗಗಳ ಜನರು, ಅಂಗವಿಕಲರು ಮುಂತಾದವರ ಭಿನ್ನ ಅಗತ್ಯಗಳನ್ನು ಅರಿತುಕೊಳ್ಳಿ ಎಂದರು.
'ದಾಖಲೆ ಕುರಿತು ಸ್ವತಂತ್ರವಾಗಿ ಚಿಂತಿಸಿ'
ಸಾಂವಿಧಾನಿಕ ವ್ಯವಸ್ಥೆಯಲ್ಲಿ ಜಿಲ್ಲಾ ನ್ಯಾಯಾಧೀಶರು ವಹಿಸುವ ಪಾತ್ರವು ಬಹಳ ಮಹತ್ವದ್ದಾಗಿದೆ. ಜಿಲ್ಲಾ ನ್ಯಾಯಾಧೀಶರು ತಮಗೆ ಸಲ್ಲಿಕೆಯಾಗಿರುವ ದಾಖಲೆಗಳ ಬಗ್ಗೆ ಸ್ವತಂತ್ರವಾಗಿ ಚಿಂತಿಸಬೇಕು. ಅಪರಾಧ ದಂಡ ಸಂಹಿತೆಯ ಅನುಸಾರ ಈಡೇರಿಸಬೇಕಿರುವ ಅಂಶಗಳು ಕೇವಲ ಶಿಷ್ಟಾಚಾರ ಅಲ್ಲ. ಅದು ಕಾರ್ಯಾಂಗದ ಚಟುವಟಿಕೆಯ ಮೇಲೆ ಇರುವ ನಿಯಂತ್ರಣಗಳಾಗಿವೆ ಮತ್ತು ಆರೋಪಿಯು ಹೊಂದಿರುವ ಹಕ್ಕುಗಳ ಪ್ರತಿನಿಧಿಯಾಗಿದೆ ಎಂದು ರಮಣ ವಿವರಿಸಿದ್ದಾರೆ.