ನವದೆಹಲಿ: ದೆಹಲಿಯ ಜಹಂಗೀರ್ ಪುರಿ ಪ್ರದೇಶದಲ್ಲಿ ಶನಿವಾರ ಸಂಭವಿಸಿದ್ದ ಕೋಮು ಸಂಘರ್ಷಕ್ಕೆ ಸಂಬಂಧಿಸಿದಂತೆ ಐವರನ್ನು ಕಠಿಣ ರಾಷ್ಟ್ರೀಯ ಭದ್ರತಾ ಕಾಯ್ದೆಯಡಿ ಬಂಧಿಸಲಾಗಿದೆ ಎಂದು ಅಧಿಕಾರಿಗಳು ಮಂಗಳವಾರ ತಿಳಿಸಿದ್ದಾರೆ.
ಪ್ರಕರಣದ ಮಾಸ್ಟರ್ ಮೈಂಡ್ ಅನ್ಸಾರ್ ಶೇಕ್ ಸೇರಿದಂತೆ ಸಲೀಂ ಚಿಕ್ನಾ, ಇಮಾಮ್ ಶೇಕ್, ದಿಲ್ಸಾದ್ ಮತ್ತು ಅಹೀದ್ ಅವರನ್ನು ರಾಷ್ಟ್ರೀಯ ಭದ್ರತಾ ಕಾಯ್ದೆಯಡಿ ಬಂಧಿಸಲಾಗಿದೆ ಎಂದು ಮೂಲಗಳು ಹೇಳಿವೆ.
ಜಹಾಂಗೀರ್‌ಪುರಿ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಎಫ್‌ಐಆರ್ ಪ್ರಕಾರ , ಶನಿವಾರ ಹನುಮ ಜಯಂತಿ ಮೆರವಣಿಗೆ ಶಾಂತಿಯುತವಾಗಿ ಆ ಪ್ರದೇಶದಲ್ಲಿ ಸಾಗುತ್ತಿತ್ತು, ಆದರೆ ಸಂಜೆ 6 ಗಂಟೆ ಸುಮಾರಿಗೆ ಸಿ-ಬ್ಲಾಕ್‌ನಲ್ಲಿರುವ ಮಸೀದಿಯ ಹೊರಗೆ ಬಂದಾಗ, ಅನ್ಸಾರ್ ತನ್ನ ನಾಲ್ಕೈದು ಸಹಚರೊಂದಿಗೆ ಶೋಭಾ ಯಾತ್ರೆ'ಯಲ್ಲಿ ಭಾಗವಹಿಸಿದವರ ಜೊತೆ ವಾಗ್ವಾದ ಆರಂಭಿಸಿದರು. ಈ ವಾಗ್ವಾದ ಕೂಡಲೇ ಹಿಂಸಾಚಾರಕ್ಕೆ ತಿರುಗಿತು ಮತ್ತು ಎರಡೂ ಕಡೆಯವರು ಪರಸ್ಪರ ಕಲ್ಲು ತೂರಾಟವನ್ನು ಪ್ರಾರಂಭಿಸಿದರು ಎಂದು ಉಲ್ಲೇಖಿಸಲಾಗಿದೆ.
ಇಮಾಮ್ ಅಲಿಯಾಸ್ ಸೋನು ಅವರನ್ನು ವಾಯುವ್ಯ ಜಿಲ್ಲಾ ಪೊಲೀಸ್ ವಿಶೇಷ ಸಿಬ್ಬಂದಿ ಸೋಮವಾರ ಬಂಧಿಸಿದ್ದಾರೆ. ಘರ್ಷಣೆಯ ವೇಳೆ ಕುಶಾಲ್ ಚೌಕ್ ಬಳಿ ಪಿಸ್ತೂಲ್ ಮೂಲಕ ಗುಂಡು ಹಾರಿಸಿರುವುದಾಗಿ ವಿಚಾರಣೆ ವೇಳೆ ಆರೋಪಿ ಬಹಿರಂಗಪಡಿಸಿದ್ದಾನೆ. ಗಲಭೆಯ ವೇಳೆ ಇಮಾಮ್ ನೀಲಿ ಕುರ್ತಾ ಧರಿಸಿ ಗುಂಡಿನ ದಾಳಿ ನಡೆಸುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.