ನವದೆಹಲಿ: ಕೇಂದ್ರದಲ್ಲಿ ಮತ್ತೊಮ್ಮೆ ಅಧಿಕಾರದ ಗದ್ದುಗೆಯೇರುವ ಕನಸು ಕಾಣುತ್ತಿರುವ ಕಾಂಗ್ರೆಸ್ ಪಕ್ಷಕ್ಕೆ ಖ್ಯಾತ ಚುನಾವಣಾ ತಂತ್ರಜ್ಞ ಪ್ರಶಾಂತ್ ಕಿಶೋರ್ ಸೇರ್ಪಡೆಯಾಗಲಿದ್ದಾರೆ ಎಂಬಂತಹ ಮಾತುಗಳು ಬಹಳ ದಿನಗಳಿಂದ ಕೇಳಿಬರುತಿತ್ತು. ಈ ಸಂಬಂಧ ಪಕ್ಷದ ಹಂಗಾಮಿ ಅಧ್ಯಕ್ಷೆ ಸೋನಿಯಾ ಗಾಂಧಿ ಕೂಡಾ ಪಕ್ಷದ ಮುಖಂಡರೊಂದಿಗೆ ಹಲವು ಸುತ್ತಿನ ಮಾತುಕತೆ ಸಹ ನಡೆಸಿದ್ದರು. ಆದರೆ, ಕೊನೆಗೆ ಏನಾಯಿತೊ, ಈಗ ಪ್ರಶಾಂತ್ ಕಿಶೋರ್ ಕಾಂಗ್ರೆಸ್ ಸೇರ್ಪಡೆಯಾಗುತ್ತಿಲ್ಲ ಎಂಬಂತಹ ಸುದ್ದಿ ಇಂದು ಹೊರಬಿದ್ದಿದೆ.
ಪ್ರಶಾಂತ್ ಕಿಶೋರ್ ಕಾಂಗ್ರೆಸ್ ಸೇರ್ಪಡೆ ಅವಕಾಶವನ್ನು ನಿರಾಕರಿಸಿದ್ದಾರೆ ಎಂದು ಪಕ್ಷದ ಮುಖ್ಯ ವಕ್ತಾರ ರಣದೀಪ್ ಸುರ್ಜೇವಾಲ ತಿಳಿಸಿದ್ದಾರೆ. ಐ-ಪ್ಯಾಕ್ ಭಾಗವಾಗಿ ಕಾಂಗ್ರೆಸ್ ಸೇರ್ಪಡೆಯಾಗಲು ಪ್ರಶಾಂತ್ ಕಿಶೋರ್ ಅವಕಾಶ ನಿರಾಕರಿಸುವುದಾಗಿ ಅವರು ತಿಳಿಸಿದ್ದಾರೆ.
ಇತ್ತೀಚಿಗೆ ನಡೆದ ಪಂಚ ರಾಜ್ಯ ಚುನಾವಣೆಯಲ್ಲಿ ಹೀನಾಯ ಸೋತಿದ್ದ ಪಕ್ಷಕ್ಕೆ ಪುನರ್ ಜನ್ಮ ನೀಡುವ ನಿಟ್ಟಿನಲ್ಲಿ ಪ್ರಶಾಂತ್ ಕಿಶೋರ್ ಅವರನ್ನು ಪಕ್ಷಕ್ಕೆ ಸೇರ್ಪಡೆ ಮಾಡಿಕೊಳ್ಳಲು ಸೋನಿಯಾಗಾಂಧಿ ಕೆಲ ತಿಂಗಳುಗಳಿಂದ ಪ್ರಯತ್ನ ನಡೆಸಿದ್ದರು. ಆದರೆ, ಈ ವಿಚಾರ ಅನೇಕ ಸಲ ವಿಳಂಬವಾಯಿತು. ಕಾಂಗ್ರೆಸ್ ಸೇರುವ ಅವಕಾಶವನ್ನು ನಿರಾಕರಿಸುತ್ತಿದ್ದೇನೆ. ಚುನಾವಣೆಯಲ್ಲಿ ಐ-ಪ್ಯಾಕ್ಸ್ ಜವಾಬ್ದಾರಿಯನ್ನು ತೆಗೆದುಕೊಳ್ಳುತ್ತೇನೆ ಎಂದು ಪ್ರಶಾಂತ್ ಕಿಶೋರ್ ಟ್ವೀಟ್ ಮೂಲಕ ತಿಳಿಸಿದ್ದಾರೆ.
ನಾನು ಕಾಂಗ್ರೆಸ್ ಸೇರ್ಪಡೆಯಾಗುವುದಕ್ಕಿಂತಲೂ ಹೆಚ್ಚಾಗಿ ಆ ಪಕ್ಷದ ನಾಯಕತ್ವದ ಅಗತ್ಯವಿದೆ. ಪರಿವರ್ತನೆಯ ಸುಧಾರಣೆಗಳ ಮೂಲಕ ಕೆಲವು ಆಳವಾದ ಬೇರೂರಿರುವ ರಚನಾತ್ಮಕ ಸಮಸ್ಯೆಗಳನ್ನು ಪರಿಹರಿಸಲು ಸಾಮೂಹಿಕ ಇಚ್ಛೆಯ ಅಗತ್ಯವಿದೆ ಎಂಬುದು ನನ್ನ ವಿನಮ್ರ ಅಭಿಪ್ರಾಯವಾಗಿದೆ ಎಂದು ಪ್ರಶಾಂತ್ ಕಿಶೋರ್ ಹೇಳಿದ್ದಾರೆ.