ಗಾಂಧಿನಗರ: ಕೆಲ ದಿನಗಳಿಂದ ಸ್ವಪಕ್ಷ ಕಾಂಗ್ರೆಸ್ ವಿರುದ್ಧವೇ ತಿರುಗಿಬೀಳ್ತಿರೋ ಗುಜರಾತ್ ಕಾಂಗ್ರೆಸ್ ಶಾಸಕ, ಪಾಟೀದಾರ್ ಸಮುದಾಯದ ಯುವ ನಾಯಕ ಹಾರ್ದಿಕ್ ಪಟೇಲ್ ಇದೀಗ ಬಿಜೆಪಿಯನ್ನ ಹೊಗಳುತ್ತಿದ್ದಾರೆ. ಈ ಮೂಲಕ ಗುಜರಾತ್ ಚುನಾವಣೆಗೂ ಮುನ್ನ ಹಾರ್ದಿಕ್ ಪಟೇಲ್ 'ಕೈ ಬಿಟ್ಟು 'ಕಮಲ ಹಿಡಿತಾರಾ ಅನ್ನೋ ಅನುಮಾನಗಳಿಗೆ ಪುಷ್ಟಿ ನೀಡಿದ್ದಾರೆ.
ಮೂರು ವರ್ಷಗಳಿಂದ ನನ್ನನ್ನು ಪಕ್ಷದಿಂದ ಕಡೆಗಣಿಸಲಾಗುತ್ತಿದೆ ಎಂದು ದೂರುತ್ತಿರುವ ಕಾಂಗ್ರೆಸ್ ನಾಯಕ ಹಾರ್ದಿಕ್ ಪಟೇಲ್ ಅವರು ಗುಜರಾತ್ ಚುನಾವಣೆಗೆ ಕೆಲವೇ ತಿಂಗಳುಗಳ ಮೊದಲು ಬಿಜೆಪಿಯನ್ನು ಹೊಗಳುವ ಮೂಲಕ ತಮ್ಮ ಪಕ್ಷದ ಹೈಕಮಾಂಡ್ ಗೆ ಆತಂಕಕಾರಿ ಸಂಕೇತಗಳನ್ನು ರವಾನಿಸುತ್ತಿದ್ದಾರೆ.
ಪ್ರಮುಖ ಪಾಟಿದಾರ್ ನಾಯಕ ಮತ್ತೊಮ್ಮೆ ತಮ್ಮ ಪಕ್ಷ ಮತ್ತು ರಾಜ್ಯ ಕಾಂಗ್ರೆಸ್ ನಾಯಕತ್ವದ ವಿರುದ್ಧ ಅಸಾಮಾಧಾನ ಹೊರಹಾಕಿದ್ದು, ಬಿಜೆಪಿಯೊಂದಿಗೆ ಮಾತುಕತೆ ನಡೆಸ್ತಿದ್ದಾರಾ ಎಂದು ಪ್ರಶ್ನಿಸಿದರೆ ನಿರಾಕರಿಸಿದ್ದಾರೆ. ಆದರೆ ಬಿಜೆಪಿಯ ಬಗ್ಗೆ ಕೆಲವು ಒಳ್ಳೆಯ ವಿಷಯಗಳಿವೆ. ನಾವು ಅದನ್ನು ಒಪ್ಪಿಕೊಳ್ಳಬೇಕು ಎಂದಿದ್ದಾರೆ.
ರಾಜಕೀಯವಾಗಿ ಬಿಜೆಪಿ ಇತ್ತೀಚಿಗೆ ತೆಗೆದುಕೊಂಡ ನಿರ್ಧಾರಗಳನ್ನು ನಾವು ಅಂತಹ ನಿರ್ಧಾರಗಳನ್ನು ತೆಗೆದುಕೊಳ್ಳುವ ಶಕ್ತಿ ಅವರಿಗೆ ಇದೆ ಎಂದು ಒಪ್ಪಿಕೊಳ್ಳಬೇಕು. ಅವರ ಪರವಾಗಿ ನಿಲ್ಲದೆ ಅಥವಾ ಅವರನ್ನು ಹೊಗಳದೆ, ನಾವು ಕನಿಷ್ಠ ಸತ್ಯವನ್ನು ಒಪ್ಪಿಕೊಳ್ಳಬಹುದು ಎಂದು ನಾನು ನಂಬುತ್ತೇನೆ.
ಗುಜರಾತ್‌ನಲ್ಲಿ ಕಾಂಗ್ರೆಸ್ ಪ್ರಬಲವಾಗಲು ಬಯಸಿದರೆ, ನಾವು ನಮ್ಮ ನಿರ್ಧಾರ ತೆಗೆದುಕೊಳ್ಳುವ ಕೌಶಲ್ಯ ಮತ್ತು ಶಕ್ತಿಯನ್ನು ಸುಧಾರಿಸಿಕೊಳ್ಳಬೇಕು ಎಂದು ಹಾರ್ದಿಕ್ ಪಟೇಲ್ ಸುದ್ದಿವಾಹಿನಿಯೊಂದಕ್ಕೆ ತಿಳಿಸಿದ್ದಾರೆ.
2015 ರಲ್ಲಿ ಗುಜರಾತ್‌ನಲ್ಲಿ ಪಾಟಿದಾರ್ ಸಮುದಾಯದ ಮೀಸಲಾತಿಗಾಗಿ ಪ್ರಬಲವಾಗಿ ಹೋರಾಡಿದ ಹಾರ್ದಿಕ್ ಪಟೇಲ್, 2019 ರ ರಾಷ್ಟ್ರೀಯ ಚುನಾವಣೆಯ ಮೊದಲು ಕಾಂಗ್ರೆಸ್‌ಗೆ ಸೇರಿದರು. ಅವರ ರಾಜಕೀಯ ಪಾದಾರ್ಪಣೆಯ ನಂತರ ಅವರ ಜನಪ್ರಿಯತೆ ಕ್ಷೀಣಿಸಿತು.