ಚೆನ್ನೈ: ಈ ಹಿಂದೆ ನೀಟ್ ವಿರುದ್ಧ ನಿರ್ಣಯ ಅಂಗೀಕರಿಸಿದ್ದ ತಮಿಳುನಾಡು ಸರ್ಕಾರ ಈಗ ಸಾಮಾನ್ಯ ವಿಶ್ವವಿದ್ಯಾನಿಲಯ ಪ್ರವೇಶ ಪರೀಕ್ಷೆ(ಸಿಯುಇಟಿ)ಯ ಪ್ರಸ್ತಾವನೆಯನ್ನು ಹಿಂಪಡೆಯುವಂತೆ ಒತ್ತಾಯಿಸಿ ಸೋಮವಾರ ತಮಿಳುನಾಡು ವಿಧಾನಸಭೆ ನಿರ್ಣಯ ಅಂಗೀಕರಿಸಿದೆ.
ಸಿಯುಇಟಿ ಸಹ ನೀಟ್‌ನಂತೆ ಶಾಲಾ ಶಿಕ್ಷಣವನ್ನು ಬದಿಗೊತ್ತಿ ಶಾಲೆಗಳಲ್ಲಿ ಒಟ್ಟಾರೆ ಅಭಿವೃದ್ಧಿ ಆಧಾರಿತ ಕಲಿಕೆಯನ್ನು ದುರ್ಬಲಗೊಳಿಸುತ್ತದೆ ಮತ್ತು ಒತ್ತಡಕ್ಕೆ ಕಾರಣವಾಗುತ್ತದೆ ಎಂದು ತಮಿಳುನಾಡು ಸರ್ಕಾರ ಹೇಳಿದೆ.
ತಮಿಳುನಾಡು ಮುಖ್ಯಮಂತ್ರಿ ಎಂ ಕೆ ಸ್ಟಾಲಿನ್ ಅವರು ಸಿಯುಇಟಿ ವಿರುದ್ಧ ನಿರ್ಣಯ ಮಂಡಿಸಿದರು. ಬಿಜೆಪಿ ಈ ನಿರ್ಣಯವನ್ನು ವಿರೋಧಿಸಿ ವಾಕ್‌ಔಟ್ ಮಾಡಿದರೆ, ಕಾಂಗ್ರೆಸ್ ಮತ್ತು ಎಡಪಕ್ಷಗಳು ಸೇರಿದಂತೆ ಆಡಳಿತಾರೂಢ ಡಿಎಂಕೆಯ ಎಲ್ಲಾ ಮಿತ್ರಪಕ್ಷಗಳು ನಿರ್ಣಯವನ್ನು ಬೆಂಬಲಿಸಿದವು.
ಪ್ರಮುಖ ಪ್ರತಿಪಕ್ಷವಾದ ಎಐಎಡಿಎಂಕೆ ಕೂಡ ಈ ಕ್ರಮವನ್ನು ಬೆಂಬಲಿಸಿದೆ ಮತ್ತು ಪರೀಕ್ಷೆಯನ್ನು ನಿಲ್ಲಿಸಲು ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳುವಂತೆ ರಾಜ್ಯ ಸರ್ಕಾರವನ್ನು ಒತ್ತಾಯಿಸಿದೆ.
ತರಗತಿಯಲ್ಲಿ ವಿದ್ಯಾರ್ಥಿಗಳು ಗಳಿಸಿದ ಅಂಕಗಳನ್ನು ಗಣನೆಗೆ ತೆಗೆದುಕೊಳ್ಳದೆ ರಾಷ್ಟ್ರೀಯ ಪರೀಕ್ಷಾ ಅಂಕಗಳ ಆಧಾರದ ಮೇಲೆ ಕೇಂದ್ರೀಯ ವಿಶ್ವವಿದ್ಯಾಲಯಗಳಿಗೆ ಪ್ರವೇಶವನ್ನು ನೀಡಲಾಗುತ್ತದೆ ಎಂದು ರಾಷ್ಟ್ರೀಯ ಪರೀಕ್ಷಾ ಏಜೆನ್ಸಿ ಹೇಳಿರುವುದಾಗಿ ನಿರ್ಣಯದಲ್ಲಿ ಉಲ್ಲೇಖಿಸಲಾಗಿದೆ.