ಬದಿಯಡ್ಕ: ಪೆರಡಾಲ ಸಮೀಪದ ಪಂಜಿತ್ತಡ್ಕ ನಿವಾಸಿ ಶ್ರೀಶಕುಮಾರ ಅವರು `ತುಳು ಯಕ್ಷಗಾನ ಪರಂಪರೆ ಮತ್ತು ಪ್ರಯೋಗ' ಎಂಬ ವಿಷಯದಲ್ಲಿ ಮಂಡಿಸಿದ ಮಹಾಪ್ರಬಂಧಕ್ಕೆ ಮಂಗಳೂರು ವಿಶ್ವವಿದ್ಯಾನಿಲಯ ಡಾಕ್ಟರೇಟ್ ಪದವಿ ನೀಡಿದೆ.
ಈ ಮೂಲಕ ಪಿಎಚ್‍ಡಿ ಪಡೆಯಬೇಕೆನ್ನುವ ತಂದೆಯರ ಮಹದಾಸೆಯನ್ನು ಪೂರ್ತಿಗೊಳಿಸಿದ ಸಂತೃಪ್ತಿಯಲ್ಲಿದ್ದಾರೆ ಶ್ರೀಶಕುಮಾರ. ಎಸ್.ವಿ.ಪಿ. ಕನ್ನಡ ಅಧ್ಯಯನ ಸಂಸ್ಥೆಯ ಪ್ರಾಧ್ಯಾಪಕ ಪ್ರೊ.ಸೋಮಣ್ಣ ಅವರ ಮಾರ್ಗದರ್ಶನದಲ್ಲಿ ಅವರು ಪ್ರಬಂಧವನ್ನು ಸಿದ್ದಪಡಿಸಿದ್ದರು.
"ಕುಮಾರವ್ಯಾಸ ಮತ್ತು ಎಳುತ್ತಚ್ಛನ್ ಮಹಾ ಭಾರತಗಳಲ್ಲಿ ಭಕ್ತಿ" ಎಂಬ ವಿಷಯದಲ್ಲಿ ಮಹಾಪ್ರಬಂಧ ಮಂಡಿಸಲು ತಂದೆ ದಿ. ಶ್ರೀಕೃಷ್ಣ ಭಟ್ ಪಿ.ಕೆ. ಅವರಿಗೆ ಅಕಾಲಿಕ ಮರಣದಿಂದಾಗಿ ಸಾಧ್ಯವಾಗಿರಲಿಲ್ಲ. ಎಳವೆಯಿಂದಲೇ ಯಕ್ಷಗಾನದಲ್ಲಿ ವಿಶೇಷ ಆಸಕ್ತಿಯನ್ನು ಹೊಂದಿದ್ದ ಡಾ. ಶ್ರೀಶಕುಮಾರ ಅವರು ರಂಗಸಿರಿ ಸಾಂಸ್ಕೃತಿಕ ವೇದಿಕೆಯ ಸ್ಥಾಪಕ ಕಾರ್ಯದರ್ಶಿ, ಕನ್ನಡ ಅಧ್ಯಾಪಕ ಸಂಘದ ಕುಂಬಳೆ ಉಪಜಿಲ್ಲಾ ಕಾರ್ಯದರ್ಶಿ, ಯವನಿಕಾ ಕಾಸರಗೋಡು ಇದರ ಸದಸ್ಯರು ಸಹಿತ ವಿವಿಧ ಸಂಘಟನೆಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಕಾರಡ್ಕ ಪ್ರೌಢಶಾಲೆಯಲ್ಲಿ ಶಿಕ್ಷಕರಾಗಿದ್ದ ಇವರು ಪ್ರಸ್ತುತ ಉದ್ಯೋಗಕ್ಕೆ ವೇತನ ರಹಿತ ರಜೆಯೊಂದಿಗೆ ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ಎಂ.ಎಡ್. ಕಲಿಯುತ್ತಿದ್ದಾರೆ. ತಾಯಿ ನಿವೃತ್ತ ಅಧ್ಯಾಪಿಕೆ ಸೀತಾಲಕ್ಷ್ಮೀ ಅವರ ನಿರಂತರ ಪ್ರೋತ್ಸಾಹವನ್ನು ಇವರ ಸಾಧನೆಗೆ ಪೂರಕವಾಗಿದೆ.