HEALTH TIPS

ಕರ್ನಾಟಕ ಯಕ್ಷಗಾನ ಅಕಾಡೆಮಿ ಪ್ರಾಯೋಕತ್ವದಲ್ಲಿ ಎಡನೀರಿನಲ್ಲಿ ಸಂಪನ್ನಗೊಂಡ ಪುಣ್ಯಸ್ಮೃತಿ, ಕೃತಿವಿಮರ್ಶೆ, ಸಾಕ್ಷ್ಯಚಿತ್ರ ಮತ್ತು ಕೃತಿ ಬಿಡುಗಡೆ.

   

                  ಬದಿಯಡ್ಕ: ಎಡನೀರು ಮಠದ ಹೆಸರನ್ನು ರಾಷ್ಟ್ರಮಟ್ಟದಲ್ಲಿ ಗುರುತಿಸುವಂತೆ ಮಾಡಿದ ಶ್ರೀ ಕೇಶವಾನಂದ ಭಾರತೀ ಸ್ವಾಮೀಜಿಯವರು ಮಠವನ್ನು ಧಾರ್ಮಿಕ ಕೇಂದ್ರವಾಗಿ ಮಾತ್ರವಲ್ಲ ಕಲಾ ಪೋಷಣೆಯ ಪ್ರಧಾನ ಕೇಂದ್ರವಾಗಿ ರೂಪಿಸುವಲ್ಲಿ ಬಹಳ ಪ್ರಮುಖ ಪಾತ್ರ ವಹಿಸಿದ್ದರು. ಆದ ಕಾರಣ ಅವರು ಕಲಾಸಂತನೂ ಹೌದು ಎಂದು ಯಕ್ಷಗಾನದ ಹಿರಿಯ ಕಲಾವಿದ ವಿದ್ವಾಂಸ ಡಾ. ಎಂ. ಪ್ರಭಾಕರ ಜೋಶಿಯವರು ಅಭಿಪ್ರಾಯಪಟ್ಟರು.

               ಎಡನೀರು ಮಠದ ಸಭಾಂಗಣದಲ್ಲಿ, ಕರ್ನಾಟಕ ಯಕ್ಷಗಾನ ಅಕಾಡೆಮಿ ಪ್ರಾಯೋಜಕತ್ವದಲ್ಲಿ, ಎಡನೀರು ಸಂಸ್ಥಾನದ ಆಶ್ರಯದಲ್ಲಿ ಹಾಗೂ ಸಿರಿಚಂದನ ಕನ್ನಡ ಯುವಬಳಗ ಕಾಸರಗೋಡು ಇದರ ಸಹಯೋಗದೊಂದಿಗೆ ಸೋಮವಾರ ನಡೆದ ಪುಣ್ಯ ಸ್ಮೃತಿ, ಕೃತಿವಿಮರ್ಶೆ, ಸಾಕ್ಷ್ಯಚಿತ್ರ ಮತ್ತು ಕೃತಿ ಬಿಡುಗಡೆ ಹಾಗೂ ಹಿರಿಯ ಕಿರಿಯ ಕಲಾವಿದರ ತಾಳಮದ್ದಳೆ ಸಮಾರಂಭದಲ್ಲಿ ಅವರು ಬ್ರಹ್ಮೈಕ್ಯರಾದ ಶ್ರೀ ಕೇಶವಾನಂದ ಭಾರತೀ ಸ್ವಾಮೀಜಿಗಳ ಪುಣ್ಯಸ್ಮರಣೆ ಮಾಡಿ ಮಾತನಾಡಿದರು. 


                  ಸೂಕ್ಷ್ಮ ವ್ಯಕ್ತಿತ್ವದ ಕೇಶವಾನಂದ ಭಾರತೀಯವರ ವಿಭಿನ್ನವಾದ ನಡೆ ಅವರನ್ನು ಸದಾ ಕಾಲ ಸ್ಮರಿಸುವಂತೆ ಮಾಡುತ್ತದೆ. ಸುಪ್ರಿಂಕೋರ್ಟಿನ ಕೇಶವಾನಂದ ಭಾರತೀ ವರ್ಸಸ್ ಕೇರಳ ರಾಜ್ಯ ನ್ಯಾಯತೀರ್ಮಾನವು  ಸದಾ ಕಾಲಕ್ಕೂ ಮಹತ್ವದ್ದು. ಎರಡು ಶತಮಾನಗಳ ಬಳಿಕವೂ ಬ್ರಹೈಕ್ಯರಾದ ಶ್ರೀ ಕೇಶವಾನಂದ ಸ್ವಾಮೀಜಿಯವರ ಸ್ಮರಣೆಯು ನಿತ್ಯನೂತನವಾಗಿರುತ್ತದೆ." ಎಂದು ಡಾ. ಎಂ. ಪ್ರಭಾಕರ ಜೋಶಿಯವರು ನುಡಿದರು.


       ಎಡನೀರು ಶ್ರೀಗಳಾದ ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿಯವರು ದೀಪಬೆಳಗಿಸಿ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿ, ಕರ್ನಾಟಕ ಯಕ್ಷಗಾನ ಅಕಾಡೆಮಿಯ ಒಲವು ಕಾಸರಗೋಡಿನ ಮೇಲೆ ಸದಾ ಇರಬೇಕು. ಆ ಮೂಲಕ ಯಕ್ಷಗಾನದ ಕಲಾಪೆÇೀಷಣೆಗೆ ಮತ್ತು ಕನ್ನಡದ ಉಳಿವು ಬೆಳವಣಿಗೆಗಳಿಗೆ ಕಾರಣವಾಗಬೇಕು. ಇಂತಹ ಕಾರ್ಯಕ್ರಮಗಳು ಅದಕ್ಕೆ ಪೂರಕ ಎಂದು ನುಡಿದರು.  


               ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕರ್ನಾಟಕ ಯಕ್ಷಗಾನ ಅಕಾಡೆಮಿಯ ಅಧ್ಯಕ್ಷ ಡಾ. ಜಿ. ಎಲ್ ಹೆಗಡೆಯವರು ವಹಿಸಿ ಮಾತನಾಡಿ, ಕಾಸರಗೋಡಿಗೂ ಯಕ್ಷಗಾನಕ್ಕೂ ಅವಿನಾಭಾವ ಸಂಬಂಧವಿದೆ. ಆದ ಕಾರಣ ಕಾಸರಗೋಡು ಯಾವತ್ತೂ ಯಕ್ಷಗಾನ ಮತ್ತು ಕನ್ನಡದ ವಿಷಯದಲ್ಲಿ ಬೇರೆಯಾಗುವುದಿಲ್ಲ ಎಂದರು. ಡಾ. ರಮಾನಂದ ಬನಾರಿಯವರು ಬರೆದ ಯಕ್ಷಗಾನ ಸಂವಾದ ಭೂಮಿಕೆ ಎಂಬ ಕೃತಿಯನ್ನು ಯಕ್ಷಗಾನ ಕಲಾವಿದ ಜಯಪ್ರಕಾಶ ಶೆಟ್ಟಿ ಪೆರ್ಮುದೆ ಹಾಗೂ ಪ್ರೊ. ಎಂ.ಎ ಹೆಗಡೆ ಮತ್ತು ಯೋಗೀಶ್ ರಾವ್ ಚಿಗುರುಪಾದೆಯವರು ಸಂಪಾದಿಸಿದ ಪಾರ್ತಿಸುಬ್ಬ ಬದುಕು ಬರಹ ಎಂಬ ಕೃತಿಯನ್ನು ರಾಧಾಕೃಷ್ಣ ಉಳಿಯತ್ತಡ್ಕ ಅವರು ಪರಿಚಯಿಸಿದರು.


                      ಮಧ್ಯಾಹ್ನ ಬಳಿ ನಡೆದ ಸಭಾ ಕಾರ್ಯಕ್ರಮದಲ್ಲಿ ಕರ್ನಾಟಕ ಯಕ್ಷಗಾನ ಅಕಾಡೆಮಿಯು ತಯಾರಿಸಿದ ಹಿರಿಯ ಅರ್ಥಧಾರಿ ಮೂಡಂಬೈಲು ಗೋಪಾಲಕೃಷ್ಣ ಶಾಸ್ತ್ರಿಯವರ ಬಗೆಗಿನ ಸಾಕ್ಷ್ಯಚಿತ್ರವನ್ನು ಹಾಗೂ ಕದ್ರಿ ನವನೀತ ಶೆಟ್ಟಿ ಸಂಪಾದಿಸಿದ ತುಳು ಯಕ್ಷಗಾನ ಪ್ರಸಂಗ ಸಂಪುಟ ಎರಡು, ಇದನ್ನು ಎಡನೀರು ಶ್ರೀಗಳು ಬಿಡುಗಡೆ ಮಾಡಿದರು. ಸಾಕ್ಷ್ಯಚಿತ್ರದ ಬಗ್ಗೆ ಯಕ್ಷಗಾನ ಕಲಾವಿದ ಸಾಹಿತಿ ರಾಧಾಕೃಷ್ಣ ಕಲ್ಚಾರ್ ಅವರು ಮಾತನಾಡಿದರು. ತುಳು ಯಕ್ಷಗಾನ ಕೃತಿಯ ಬಗ್ಗೆ ಯಕ್ಷಗಾನ ಸಂಘಟಕ ಅಮ್ಮುಂಜೆ ಜನಾರ್ದನ ಮಾತನಾಡಿದರು. ಹಿರಿಯರಾದ ಮೂಡಂಬೈಲು ಗೋಪಾಲಕೃಷ್ಣ ಶಾಸ್ತ್ರಿ, ಡಾ. ರಮಾನಂದ ಬನಾರಿ, ಕರ್ನಾಟಕ ಯಕ್ಷಗಾನ ಅಕಾಡೆಮಿಯ ರಿಜಿಸ್ಟ್ರಾರ್ ಜಿ. ಎಸ್ ಶಿವರುದ್ರಪ್ಪ, ಅಕಾಡೆಮಿ ಸದಸ್ಯರಾದ ಯೋಗೀಶ್ ರಾವ್ ಚಿಗುರುಪಾದೆ, ದಾಮೋದರ ಶೆಟಿ,  ನವನೀತ ಶೆಟಿ ಕದ್ರಿ, ಸಿರಿಚಂದನದ ಮಾರ್ಗದರ್ಶಕ ಡಾ. ರತ್ನಾಕರ ಮಲ್ಲಮೂಲೆ,  ಅಧ್ಯಕ್ಷ ಕಾರ್ತಿಕ್ ಪಡ್ರೆ, ಸದಸ್ಯೆ ಸುಜಾತಾ ಸಿ ಎಚ್, ಸುನೀತಾ ಮಯ್ಯ, ಅನುರಾಧ ಕಲ್ಲಂಗೂಡ್ಲು ಈ ಮುಂತಾದವರು ಮಾತನಾಡಿದರು. 

    ಸಿರಿಚಂದನ ಕನ್ನಡ ಯುವಬಳಗದ ಯುವ ಕಲಾವಿದರಿಂದ ಕರ್ಣಾರ್ಜುನ ಎಂಬ ಯಕ್ಷಗಾನ ತಾಳಮದ್ದಳೆಯು ನಡೆಯಿತು. ಹಿಮ್ಮೇಳದಲ್ಲಿ ಭಾಗವತರಾಗಿ ಸಚಿನ್ ಶೆಟ್ಟಿ ಕುದ್ರೆಪ್ಪಾಡಿ, ಚೆಂಡೆ ಮದ್ದಳೆಯಲ್ಲಿ ರಾಜೇಂದ್ರ ಪ್ರಸಾದ್ ಪುಂಡಿಕೈ ಹಾಗೂ ದಿವಾಣ ಶ್ರೀಸ್ಕಂದ ಸಹಕರಿಸಿದರು. ಮುಮ್ಮೇಳದಲ್ಲಿ ದಿವಾಕರ ಬಲ್ಲಾಳ್, ಮನೋಜ್ ಎಡನೀರು, ಶಶಿಧರ ಕುದಿಂಗಿಲ, ಕಾರ್ತಿಕ್ ಪಡ್ರೆ, ವಿನಯ ಎಸ್ ಚಿಗುರುಪಾದೆ ಭಾಗವಹಿಸಿದರು. ಮಧ್ಯಾಹ್ನ ಅನಂತರದ ಕೃಷ್ಣ ಸಂಧಾನ ತಾಳಮದ್ದಳೆಯಲ್ಲಿ ಭಾಗವತರಾಗಿ ತಲ್ಪಣಾಜೆ ವೆಂಕಟ್ರಮಣ ಭಟ್, ಚೆಂಡೆ ಮದ್ದಳೆಯಲ್ಲಿ ರಾಜೇಂದ್ರ ಪ್ರಸಾದ್ ಪುಂಡಿಕೈ ಹಾಗೂ ದಿವಾಣ ಶ್ರೀಸ್ಕಂದ ಸಹಕರಿಸಿದರು. ಮುಮ್ಮೇಳದಲ್ಲಿ ಹಿರಿಯ ಕಲಾವಿದರಾದ ರಾಜೇಂದ್ರ ಕಲ್ಲೂರಾಯ ಎಡನೀರು, ರಾಧಾಕೃಷ್ಣ ಕಲ್ಚಾರ್, ಬಾಲಕೃಷ್ಣ ಆಚಾರ್ಯ ನೀರ್ಚಾಲು ಪಾಲ್ಗೊಂಡರು. 

ಕಾರ್ಯಕ್ರಮವನ್ನು ಕಾರ್ತಿಕ್ ಪಡ್ರೆ, ಸುಬ್ರಹ್ಮಣ್ಯ ಹೇರಳ ನಿರೂಪಿಸಿದರು. ರತ್ನಾಕರ ಮಲ್ಲಮೂಲೆ ಸ್ವಾಗತಿಸಿ ಸುಜಿತ್ ಉಪ್ಪಳ ವಂದಿಸಿದರು. ಸುನಿತಾ ಮಯ್ಯ ಮತ್ತು ಪವಿತ್ರ ಎಡನೀರು ಪ್ರಾರ್ಥನೆ ಹಾಡಿದರು. 



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries