ಅಹ್ಮದಾಬಾದ್: ಇಂಡಿಯನ್ ಇನ್‍ಸ್ಟಿಟ್ಯೂಟ್ ಆಫ್ ಅಹ್ಮದಾಬಾದ್ ತನ್ನ ಲೋಗೋ ಬದಲಾಯಿಸುವ ನಿರ್ಧಾರವನ್ನು ಅಲ್ಲಿನ ಪ್ರಸ್ತುತ ಮತ್ತು ಮಾಜಿ ಶಿಕ್ಷಕರು ವಿರೋಧಿಸಿದ್ದಾರೆ. ಸಂಸ್ಥೆಯ ಈಗಿನ ಲಾಂಛನವನ್ನು ಎರಡು ಪ್ರತ್ಯೇಕ ಚಿಹ್ನೆಗಳೊಂದಿಗೆ ಬದಲಿಸಲಾಗುವುದು, ಒಂದು ಚಿಹ್ನೆ ದೇಶೀಯ ಜನರಿಗಾದರೆ ಇನ್ನೊಂದು ಅಂತರಾಷ್ಟ್ರೀಯ ಜನರಿಗಾಗಿದೆ.
ಲಾಂಛನ ಬದಲಾವಣೆಯಿಂದ ಸಾಕಷ್ಟು ಪರಿಣಾಮವುಂಟಾಗಲಿದೆ ಎಂದು ಸಂಸ್ಥೆಯ ಆಡಳಿತ ಮಂಡಳಿಯ ಅಧ್ಯಕ್ಷ ಕುಮಾರ ಮಂಗಲಂ ಬಿರ್ಲಾ ಅವರಿಗೆ 40 ಮಂದಿ ಶಿಕ್ಷಕರು ಪತ್ರ ಬರೆದು ವಿವರಿಸಿದ್ದಾರೆ.
ಸಂಸ್ಥೆಯ ಈಗಿನ ಲಾಂಛನವನ್ನು 1961ರಲ್ಲಿ ಅನಾವರಣಗೊಳಿಸಲಾಗಿತ್ತು ಹಾಗೂ ಅದರಲ್ಲಿ ಸಂಸ್ಕೃತ ಶ್ಲೋಕ ವಿದ್ಯಾ ವಿನಿಯೋಗದ್ವಿಕಾಸ ಎಂದೂ ಬರೆಯಲಾಗಿದೆ ಹಾಗೂ ಇದರರ್ಥ ಜ್ಞಾನದ ಅನ್ವಯಿಸುವಿಕೆಯಿಂದ ಅಭಿವೃದ್ಧಿ ಎಂಬುದಾಗಿದೆ. ಆದರೆ ಈ ಶ್ಲೋಕವನ್ನು ಈಗ ಅಂತರಾಷ್ಟ್ರೀಯ ಮಟ್ಟದಲ್ಲಿ ಲಾಂಛನ ಪ್ರದರ್ಶಿಸುವ ಸಂದರ್ಭ ಮಾತ್ರ ಬಳಸಲಾಗುವುದು
ಸಂಸ್ಥೆಯ ಲಾಂಛನದಲ್ಲಿ ಅಹ್ಮದಾಬಾದ್‍ನ ಸಿದಿ ಸಯ್ಯದ್ ಮಸೀದಿಯ ಜಾಲಿಯಿಂದ ಪ್ರೇರಿತ ಕಲಾಕೃತಿಯಿದೆ ಆದರೆ ಹೊಸ ಲಾಂಛನದಲ್ಲಿ ಇದು ಅಷ್ಟೊಂದು ಪ್ರಮುಖವಾಗಿ ಗೋಚರಿಸುತ್ತಿಲ್ಲ ಎಂದು ಪತ್ರದಲ್ಲಿ ಹೇಳಲಾಗಿದೆ.
ಈ ಲಾಂಛನ ನಮ್ಮ ಗುರುತು- ಜಾಲಿ ಮತ್ತು ಸಂಸ್ಕೃತ ಶ್ಲೋಕ ಭಾರತದ ಪರಂಪರೆಯ ದ್ಯೋತಕವಾಗಿದೆ ಈ ಚಿಹ್ನೆ ನಮ್ಮ ಭಾರತೀಯತೆಯನ್ನು ಪ್ರತಿಬಿಂಬಿಸುತ್ತದೆ, ಆದರೆ ಲಾಂಛನ ಬದಲಾಯಿಸುವ ಮುನ್ನ ಶಿಕ್ಷಕರ ಅಭಿಪ್ರಾಯ ಸಂಗ್ರಹಿಸಲಾಗಿರಲಿಲ್ಲ ಎಂದು ಪತ್ರದಲ್ಲಿ ವಿವರಿಸಲಾಗಿದೆ.
ಮೂಲ ಲಾಂಛನದ ಪರಂಪರೆಯನ್ನು ಹೊಸ ಲಾಂಛನ ಮುಂದುವರಿಸಿದೆ ಎಂದು ಸಂಸ್ಥೆಯ ಆಡಳಿತ ಮಂಡಳಿ ಹೇಳಿಕೆ ಬಿಡುಗಡೆಗೊಳಿಸಿದೆ. ಸಂಸ್ಥೆಯ ವೆಬ್‍ಸೈಟ್ ಅನ್ನು ಹೊಸತಾಗಿ ಮಾಡುತ್ತಿರುವುದರಿಂದ ಲಾಂಛನಕ್ಕೂ ಹೊಸ ರೂಪ ನೀಡಲು ನಿರ್ಧರಿಸಲಾಯಿತು ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.