ಕೊಲಂಬೊ: ತೀವ್ರ ಆರ್ಥಿಕ ಬಿಕ್ಕಟ್ಟಿಗೆ ಸಿಲುಕಿರುವ ಶ್ರೀಲಂಕಾದಲ್ಲಿ ಭಾನುವಾರ ತಡರಾತ್ರಿ ಪ್ರಮುಖ ಬೆಳವಣಿಗೆಯೊಂದು ಸಂಭವಿಸಿದೆ. ಶ್ರೀಲಂಕಾದ ಸಂಸತ್ತಿನ ಎಲ್ಲಾ ಸಚಿವರುಗಳು ತಮ್ಮ ತಮ್ಮ ಸ್ಥಾನಗಳಿಗೆ ಸಾಮೂಹಿಕ ರಾಜೀನಾಮೆ ನೀಡಿದ್ದಾರೆ. ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದವರಲ್ಲಿ ರಾಜಪಕ್ಸೆ ಅವರ ಪುತ್ರ ನಮಲ್ ರಾಜಪಕ್ಸ ಕೂಡ ಸೇರಿದ್ದಾರೆ.
ಮಹಿಂದ ರಾಜಪಕ್ಸೆ ಅವರ ರಾಜೀನಾಮೆಯ ವರದಿಗಳನ್ನು ಪ್ರಧಾನಿ ಕಚೇರಿ ನಿರಾಕರಿಸಿದ ಕೆಲವೇ ಗಂಟೆಗಳ ನಂತರ ಶ್ರೀಲಂಕಾದ ಸಂಸತ್ತಿನ ಎಲ್ಲಾ ಸಚಿವರುಗಳು ರಾಜೀನಾಮೆ ಸಲ್ಲಿಕೆ ಮಾಡಿದ್ದಾರೆ. ಆದರೆ, ಮಹಿಂದಾ ರಾಜಪಕ್ಸೆ ಪ್ರಧಾನಿಯಾಗಿ ಮುಂದುವರೆದಿದ್ದಾರೆ.
ನಿನ್ನೆ ತಡರಾತ್ರಿ ನಡೆದ ಸಭೆಯಲ್ಲಿ ಎಲ್ಲಾ ಸಚಿವರು ತಮ್ಮ ಸ್ಥಾನಗಳಿಗೆ ಸಾಮೂಹಿಕ ರಾಜೀನಾಮೆ ನೀಡಿದ್ದಾರೆಂದು ತಿಳಿದುಬಂದಿದೆ. ರಾಜಪಕ್ಸ ಅವರ ಪುತ್ರ ನಮಲ್ ರಾಜಪಕ್ಸ ಅವರು ಕ್ರೀಡಾ ಸಚಿವರಾಗಿ ಕಾರ್ಯನಿರ್ವಹಿಸುತ್ತಿದ್ದರು.
ರಾಜೀನಾಮೆ ನೀಡಿದ ಬಳಿಕ ಟ್ವೀಟ್ ಮಾಡಿದ್ದ ನಮಲ್ ರಾಜಪಕ್ಸೆ ಅವರು, ಎಲ್ಲ ಖಾತೆಗಳಿಗೆ ನನ್ನ ರಾಜೀನಾಮೆಯನ್ನು ತಕ್ಷಣವೇ ಜಾರಿಗೆ ಬರುವಂತೆ ಅಧ್ಯಕ್ಷರಿಗೆ ತಿಳಿಸಿದ್ದೇನೆಂದು ಹೇಳಿದ್ದಾರೆ.
ನಿನ್ನೆ ಬೆಳಿಗ್ಗೆ ಆರ್ಥಿಕ ಬಿಕ್ಕಟ್ಟಿನ ವಿರುದ್ಧ ವಿದ್ಯಾರ್ಥಿಗಳು ರಾಡೆನಿಯಾ ವಿಶ್ವವಿದ್ಯಾಲಯದ ಹೊರಗೆ ಪ್ರತಿಭಟನೆ ನಡೆಸಿದ್ದರು. ಈ ವೇಳೆ ಸರ್ಕಾರದ ವಾರಾಂತ್ಯದ ಕರ್ಫ್ಯೂವನ್ನು ಧಿಕ್ಕರಿಸಿ ಪ್ರತಿಭಟನೆ ನಡೆದ ಹಿನ್ನೆಲೆಯಲ್ಲಿ ಪೊಲೀಸರು ಪ್ರತಿಭಟನಾಕಾರರನ್ನು ಚದುರಿಸಲು ಅಶ್ರುವಾಯು ಹಾಗೂ ಫಿರಂಗಿಗಳನ್ನು ಬಳಸಿದ್ದರು.
ರಾಜಧಾನಿ ಕೊಲಂಬೊದಲ್ಲಿ ವಿರೋಧ ಪಕ್ಷದ ನಾಯಕರು ನಡೆಸಿದ ಮೆರವಣಿಗೆಯಲ್ಲಿ 100 ಕ್ಕೂ ಹೆಚ್ಚು ಜನರು ಭಾಗವಹಿಸಿದ್ದರು. ವಿರೋಧ ಪಕ್ಷದ ನಾಯಕ ಸಜಿತ್ ಪ್ರೇಮದಾಸ ಅವರ ಮನೆಯ ಬಳಿ ಪ್ರತಿಭಟನಾಕಾರರು ಬರುತ್ತಿದ್ದಂತೆ ಪೊಲೀಸರು ಮತ್ತು ಸೈನಿಕರು ತಡೆದರು.
ಈ ನಡುವೆ ಅಧ್ಯಕ್ಷ ಗೋಟಬಯ ರಾಜಪಕ್ಸೆ ವಿರುದ್ಧದ ಪ್ರತಿಭಟನೆಯನ್ನು ಹತ್ತಿಕ್ಕಲು ಶ್ರೀಲಂಕಾ ಸರ್ಕಾರ ಶನಿವಾರ ಫೇಸ್‌ಬುಕ್, ಟ್ವಿಟರ್, ಇನ್‌ಸ್ಟಾಗ್ರಾಮ್, ವಾಟ್ಸಾಪ್ ಮತ್ತು ಯೂಟ್ಯೂಬ್ ಸೇರಿದಂತೆ ಎಲ್ಲಾ ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್‌ಗಳಿಗೆ ಪ್ರವೇಶವನ್ನು ನಿರ್ಬಂಧಿಸಲಾಗಿದೆ.
ಶನಿವಾರ ಸಂಜೆ 6 ಗಂಟೆಯಿಂದ ಸೋಮವಾರ ಬೆಳಿಗ್ಗೆ 6 ರವರೆಗೆ ಕರ್ಫ್ಯೂ ಅನ್ನು ವಿಧಿಸಲಾಗಿದೆ. ಕರ್ಫ್ಯೂ ಉಲ್ಲಂಘಿಸಿದ್ದಕ್ಕಾಗಿ ಕನಿಷ್ಠ 664 ಜನರನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
1948ರ ಸ್ವಾತಂತ್ರ್ಯದ ಬಳಿಕ ತೀವ್ರ ಆರ್ಥಿಕ ಬಿಕ್ಕಟ್ಟಿಗೆ ಸಿಲುಕಿ ಒದ್ದಾಡುತ್ತಿರುವ ಶ್ರೀಲಂಕಾ ಕಳೆದೊಂದು ವಾರದಿಂದ ವಿದ್ಯುತ್ ಕಡಿತದ ಜೊತೆಗೆ ಆಹಾರ, ಇಂಧನ ಮತ್ತು ಇತರ ಅಗತ್ಯ ವಸ್ತುಗಳ ತೀವ್ರ ಕೊರತೆಯನ್ನು ಎದುರಿಸುತ್ತಿದೆ.