ವಾಷಿಂಗ್ಟನ್: ವಿಶ್ವದ 7.9 ಶತಕೋಟಿ ಜನರಲ್ಲಿ ರೋಗಕ್ಕೆ ಕಾರಣವಾಗುವ ರೂಪಾಂತರಗಳು ಹಾಗೂ ಅನುವಂಶಿಕ ವ್ಯತ್ಯಾಸದ ಕುರುಹುಗಳ ಬಗ್ಗೆ ನಡೆಯುತ್ತಿರುವ ಸಂಶೋಧನೆಗೆ ಪೂರಕವಾಗುವ ಮಾನವನ ಅನುವಂಶಿಕ ಮಾಹಿತಿಯ ಪ್ರಪ್ರಥಮ ಸಂಪೂರ್ಣ ಕ್ರಮಾವಳಿಯನ್ನು ವಿಜ್ಞಾನಿಗಳು ಗುರುವಾರ ಪ್ರಕಟಿಸಿದ್ದಾರೆ.
ಜಿನೋಮ್ ಎಂಬುದು ಜೀವಿಯೊಂದರ ಸಂಪೂರ್ಣ ಅನುವಂಶಿಕ ಮಾಹಿತಿಯಾಗಿದೆ.2003ರಲ್ಲಿ ಸಿದ್ಧಪಡಿಸಿದ್ದ ದಾಖಲೆ ಮಾನವನ ಅನುವಂಶಿಕ ಮಾಹಿತಿಯ ಸಂಪೂರ್ಣ ಕ್ರಮಾವಳಿ ಎಂದು ಸಂಶೋಧಕರು ಪ್ರತಿಪಾದಿಸಿದ್ದರು.
ಆದರೆ ಅದರಲ್ಲಿ ಡಿಎನ್‌ಎಯ ಪುನರಾವರ್ತಿತ ಅಂಶಗಳು ಇದ್ದ ಕಾರಣ ಸುಮಾರು 8%ದಷ್ಟು ಗೂಢಲಿಪಿಯಾಗಿ ಉಳಿದಿತ್ತು. ಇದೀಗ ವಿಜ್ಞಾನಿಗಳ ತಂಡವು ಸಿದ್ಧಪಡಿಸಿರುವ ನೂತನ ಕ್ರಮಾವಳಿಯನ್ನು 'ದಿ ಜರ್ನಲ್ ಸೈಯನ್ಸ್'ನಲ್ಲಿ ಪ್ರಕಟಿಸಲಾಗಿದೆ.
ನಮ್ಮ ಡಿಎನ್‌ಎಯ ಸಮಗ್ರ ನೀಲನಕ್ಷೆಯನ್ನು ಒದಗಿಸಿರುವ ನಿಜವಾದ ಸಂಪೂರ್ಣ ಮಾನವ ಅನುವಂಶಿಕ ಮಾಹಿತಿಯನ್ನು ಸಿದ್ಧಪಡಿಸಿರುವುದು ನಂಬಲಾಗದ ವೈಜ್ಞಾನಿಕ ಸಾಧನೆಯಾಗಿದೆ. ಈ ಮೂಲಭೂತ ಮಾಹಿತಿಯು ಮಾನವನ ಜಿನೋಮ್ನ ಎಲ್ಲಾ ಕ್ರಿಯಾತ್ಮಕ ಸೂಕ್ಷ್ಮ ವ್ಯತ್ಯಾಸಗಳನ್ನು ಅರ್ಥಮಾಡಿಕೊಳ್ಳಲು ನಡೆಯುತ್ತಿರುವ ಅನೇಕ ಪ್ರಯತ್ನಗಳನ್ನು ಬಲಪಡಿಸುತ್ತದೆ. ಇದು ಮಾನವ ಕಾಯಿಲೆಯ ಅನುವಂಶಿಕ ಅಧ್ಯಯನಕ್ಕೆ ಬಲ ತುಂಬುತ್ತದೆ ಎಂದು ಅಮೆರಿಕದ 'ನ್ಯಾಷನಲ್ ಹ್ಯೂಮನ್ ಜೆನೋಮ್ ರಿಸರ್ಚ್ ಇನ್‌ಸ್ಟಿಟ್ಯೂಟ್'ನ ನಿರ್ದೇಶಕ ಎರಿಕ್ ಗ್ರೀನ್ ಹೇಳಿದ್ದಾರೆ.
ಇತರ ಮಾಹಿತಿಯ ಜತೆಗೆ, ಹೊಸ ಡಿಎನ್‌ಎ ಅನುಕ್ರಮವು(ಕ್ರಮಾವಳಿ) ಸೆಂಟ್ರೊಮಿರ್ ಎಂದು ಕರೆಯಲ್ಪಡುವ ವ್ಯವಸ್ಥೆಯ ಬಗ್ಗೆ ತಾಜಾ ವಿವರ ಒದಗಿಸಿದೆ. ಸೆಂಟ್ರೊಮಿರ್ನಲ್ಲಿ ಪ್ರತೀ ಕೋಶವನ್ನು ವಿಭಜಿಸಿದಾಗ ಉಂಟಾಗುವ ಉಪಕೋಶಗಳು ಸರಿಯಾದ ಸಂಖ್ಯೆಯ ವರ್ಣತಂತುಗಳನ್ನು ಅನುವಂಶಿಕವಾಗಿ ಪಡೆಯುವುದನ್ನು ಖಾತರಿಪಡಿಸಲಾಗುತ್ತದೆ.
ಜಿನೋಮ್ ಅನುಕ್ರಮಣಿಕೆ ಹೊಂದಿರುವ ವ್ಯಕ್ತಿಗಳ ಡಿಎನ್‌ಎಯಲ್ಲಿನ ಎಲ್ಲಾ ರೂಪಾಂತರಗಳನ್ನು ಗುರುತಿಸಲು ಮತ್ತು ಅವರ ಆರೋಗ್ಯ ರಕ್ಷಣೆಗೆ ಉತ್ತಮ ಮಾರ್ಗದರ್ಶನ ನೀಡಲು ಈ ಮಾಹಿತಿಯನ್ನು ಬಳಸಲು ಸಾಧ್ಯವಾಗಲಿದೆ ಎಂದು ವಿಜ್ಞಾನಿಗಳ ತಂಡದಲ್ಲಿದ್ದ ಆಯಡಮ್ ಫಿಲಿಪ್ಪಿ ಹೇಳಿದ್ದಾರೆ.